ಅಮರಾವತಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಉದ್ಯಮಿಯೊಬ್ಬರು ಬರೋಬ್ಬರಿ 121 ಕೆಜಿ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಲು ಸಿದ್ಧತೆ ನಡೆಸಿದ್ದಾರೆ.
ನವೆಂಬರ್ 26ರಂದು ಈ ಚಿನ್ನಾಭರಣಗಳನ್ನು ದೇವರಿಗೆ ಅರ್ಪಿಸಲಿದ್ದು, ಇದರ ಅಂದಾಜು ಮೌಲ್ಯ ಬರೋಬ್ಬರಿ 150ರಿಂದ 160 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ತಿರುಮಲ ದೇವಸ್ಥಾನದ ಇತಿಹಾಸದಲ್ಲೇ ವೈಯಕ್ತಿಕ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಿದೆ ಎನ್ನಲಾಗಿದೆ.
ಒಟ್ಟು 121 ಕೆಜಿ ತೂಕದ ಚಿನ್ನದಲ್ಲಿ 9 ಸೆಟ್ಗಳಾಗಿ 45 ವಿವಿಧ ಆಭರಣಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲ ಆಭರಣಗಳ ಒಟ್ಟು ಮೌಲ್ಯ ಸುಮಾರು 150ರಿಂದ 160 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈಗಾಗಲೇ ದಾನಿಯು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಕಾಣಿಕೆ ಸಮರ್ಪಣೆಗೆ ಅಗತ್ಯವಿರುವ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ.
ನವೆಂಬರ್ 26ರಂದು ದೇವಸ್ಥಾನದಲ್ಲಿ ಅಧಿಕೃತವಾಗಿ ಚಿನ್ನಾಭರಣಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ, 2025ರ ಆಗಸ್ಟ್ನಲ್ಲಿ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಷೇರು ಮಾರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನವನ್ನು ಕಾಣಿಕೆಯಾಗಿ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಆಭರಣಗಳ ತಯಾರಿಕೆ ಪೂರ್ಣಗೊಂಡಿದ್ದು, ನವೆಂಬರ್ 26ರಂದು ತಿಮ್ಮಪ್ಪನ ಸನ್ನಿಧಿಯಲ್ಲಿ ಈ ಬೃಹತ್ ಚಿನ್ನದ ಕಾಣಿಕೆ ಸಮರ್ಪಣೆಯಾಗಲಿದೆ.









