ಹಾಸನ: ಬೇಲೂರು ತಾಲೂಕಿನಲ್ಲಿ ಕಾಡಾನೆಗಳನ್ನು ಕಾಡಿಗೆ ಮರಳಿಸುವ ಅರಣ್ಯ ಇಲಾಖೆಯ ಕಾರ್ಯಾಚರಣೆ ಐದನೇ ದಿನವೂ ಮುಂದುವರಿದಿದೆ.
ಸತತ ಕಾರ್ಯಾಚರಣೆಯ ಫಲವಾಗಿ 38 ಕಾಡಾನೆಗಳ ಗುಂಪು ಹಾಸನ ಜಿಲ್ಲೆಯ ಗಡಿ ದಾಟಿ ಚಿಕ್ಕಮಗಳೂರು ಜಿಲ್ಲೆಯತ್ತ ಸಾಗಿವೆ. ನಾಲ್ಕು ಸಲಗಗಳು, ಐದಕ್ಕೂ ಹೆಚ್ಚು ಮರಿಯಾನೆಗಳು ಹಾಗೂ ಕಾಡಾನೆ ಭೀಮಾ ಕೂಡ ಈ ಗುಂಪಿನಲ್ಲಿರುವುದು ವಿಶೇಷ.
ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಗುಂಪನ್ನು ಯಶಸ್ವಿಯಾಗಿ ಗಡಿ ದಾಟಿಸಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಬಳಿ ಕಾಡಾನೆಗಳ ಗುಂಪು ಬೀಡುಬಿಟ್ಟಿದೆ. ಇಂದು ತತ್ಕೋಳ ಅರಣ್ಯದ ಮೂಲಕ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಸಮೀಪದ ಅರಮನೆ ಗುಡ್ಡದ ಬಳಿ ಇದ್ದ ಕಾಡಾನೆಗಳ ಗುಂಪನ್ನು ಸತತ ಐದು ದಿನಗಳ ಕಾರ್ಯಾಚರಣೆಯ ಮೂಲಕ ಹಾಸನ ಜಿಲ್ಲೆಯ ಗಡಿ ದಾಟಿಸಲಾಗಿದೆ. ಸಾಕಾನೆಗಳ ಸಹಾಯವಿಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಯೇ ಕಾರ್ಯಾಚರಣೆ ನಡೆಸುತ್ತಿರುವುದು ವಿಶೇಷ. ಸದ್ಯ ಕಾಡಾನೆಗಳು ತತ್ಕೋಳ ಅರಣ್ಯ ಪ್ರದೇಶದಿಂದ ಸುಮಾರು 8.5 ಕಿಲೋಮೀಟರ್ ದೂರದಲ್ಲಿವೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಇಂದು ಮುಂಜಾನೆ 3 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಸುಮಾರು 6 ಕಿಲೋಮೀಟರ್ ದೂರ ಕಾಡಾನೆಗಳನ್ನು ಓಡಿಸಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅರಣ್ಯ ಇಲಾಖೆ ತಂಡಗಳು ಹಾಗೂ ಅಧಿಕಾರಿಗಳ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಸಿಎಫ್ ಏಡುಕೊಂಡಲು ಮಾಹಿತಿ ನೀಡಿದ್ದಾರೆ.









