ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ ರಾಮರಾವ್ ವಡ್ಕುಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸುಮಾರು ಎಂಟು ತಿಂಗಳ ಹಿಂದಷ್ಟೇ ಬಿಜೆಪಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಅನುಭವಿ ರಾಜಕಾರಣಿ ಹಾಗೂ ವಾಕ್ಚಾತುರ್ಯಕ್ಕೆ ಹೆಸರಾಗಿದ್ದ ವಡ್ಕುಟೆ, ಕಳಂಕರಹಿತ ರಾಜಕೀಯ ವ್ಯಕ್ತಿತ್ವ ಹೊಂದಿದ್ದರು ಎಂಬ ಹೆಗ್ಗಳಿಕೆ ಪಡೆದಿದ್ದರು.
ಇನ್ನು ವಡ್ಕುಟೆ ಅವರ ರಾಜಕೀಯ ಜೀವನ ಗಮನಾರ್ಹವಾಗಿತ್ತು. ಈ ಹಿಂದೆ ಶೆಲಿ-ಮೆಂಧಿ ಮಹಾಸಂಘದ ಅಧ್ಯಕ್ಷರಾಗಿ, ಅಂದರೆ ಮೇಕೆ ಮತ್ತು ಕುರಿ ಸಾಕಣೆದಾರರ ಒಕ್ಕೂಟದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಎನ್ಸಿಪಿ ಸೇರಿ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು.
2019ರ ಅಕ್ಟೋಬರ್ನಲ್ಲಿ ಎನ್ಸಿಪಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 2021ರಲ್ಲಿ ಬಿಜೆಪಿ ಅವರನ್ನು ಹಿಂಗೋಲಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿತ್ತು. ನಂತರ ಹಿಂಗೋಲಿ ಲೋಕಸಭಾ ಕ್ಷೇತ್ರದ ಚುನಾವಣಾ ಮುಖ್ಯಸ್ಥ ಹಾಗೂ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಮಹಾರಾಷ್ಟ್ರದ ಧಾಂಗರ್ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ವಡ್ಕುಟೆ ಅವರ ರಾಜಕೀಯ ಸಾಧನೆ ಪರಿಗಣಿಸಿ ಬಿಜೆಪಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಇದೀಗ ಅವರ ನಿಧನಕ್ಕೆ ರಾಜಕೀಯ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.









