ಗದಗ: ಕಳೆದ ವರ್ಷದ ಬೆಳೆ ಹಾನಿಗೆ ಇನ್ನೂ ಬೆಳೆವಿಮೆ ಪರಿಹಾರ ಸಿಗದೆ ರೈತರು ಸಂಕಷ್ಟದಲ್ಲಿರುವ ಬೆನ್ನಲ್ಲೇ, ಪ್ರಸಕ್ತ ಸಾಲಿನಲ್ಲೂ ಬರಗಾಲದ ಹೊಡೆತಕ್ಕೆ ಸಿಲುಕಿ ಅನ್ನದಾತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನ ಬಾಕಿ ಬೆಳೆವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗದಗ ವಿಧಾನಸಭಾ ಕ್ಷೇತ್ರದ 2023ರ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಪಿ. ಮೆಣಸಿನಕಾಯಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
2025-26ನೇ ಸಾಲಿನಲ್ಲಿ ಬೆಳೆಹಾನಿಯಿಂದ ಜಿಲ್ಲೆಯ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅರ್ಹ ರೈತರಿಗೆ ಬರಬೇಕಾದ ಪರಿಹಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಮೆಯಾಗಿಲ್ಲ. ರಾಜ್ಯ ಸರ್ಕಾರದ ಪಾಲಿನ ಮೊತ್ತ ಪಾವತಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅ.23ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದನ್ನೂ ಅನಿಲ ಮೆಣಸಿನಕಾಯಿ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ವರ್ಷದ ಬೆಳೆ ನಷ್ಟದ ಸಂಕಷ್ಟದಿಂದ ರೈತರು ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ 2026-27ನೇ ಸಾಲಿನಲ್ಲಿಯೂ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಬೆಳೆಗಳು ಒಣಗುತ್ತಿವೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯನ್ನೇ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಹಿಂದಿನ ಸಾಲಿನ ಬೆಳೆವಿಮೆ ಪರಿಹಾರ ಕೈ ಸೇರಿಲ್ಲ, ಮತ್ತೊಂದೆಡೆ ಪ್ರಸಕ್ತ ಸಾಲಿನ ಬರಗಾಲ ರೈತರನ್ನು ಸಾಲದ ಸುಳಿಗೆ ತಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಪಾಲಿನ ಬೆಳೆವಿಮೆ ಮೊತ್ತವನ್ನು ವಿಳಂಬ ಮಾಡದೆ ಪಾವತಿಸಿ, ಕೇಂದ್ರದ ಪಾಲಿನ ಅನುದಾನ ಸೇರಿದಂತೆ ಪರಿಹಾರ ಬಿಡುಗಡೆ ಪ್ರಕ್ರಿಯೆ ತ್ವರಿತಗೊಳಿಸಬೇಕು. ಜಿಲ್ಲೆಯ ಅರ್ಹ ರೈತರ ಖಾತೆಗಳಿಗೆ ಬಾಕಿ ಮೊತ್ತವನ್ನು ಕೂಡಲೇ ಜಮೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಅನಿಲ ಮೆಣಸಿನಕಾಯಿ ಆಗ್ರಹಿಸಿದ್ದಾರೆ.
ರೈತರ ಹಿತವೇ ಆದ್ಯತೆಯಾಗಿದ್ದು, ಅವರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ಅನಿಲ ಮೆಣಸಿನಕಾಯಿ ತಿಳಿಸಿದ್ದಾರೆ.









