HomeGadag Newsಕನಿಷ್ಠ ವೇತನ ತಡೆಗೆ ಗ್ರಾಪಂ ನೌಕರರ ಆಕ್ರೋಶ

ಕನಿಷ್ಠ ವೇತನ ತಡೆಗೆ ಗ್ರಾಪಂ ನೌಕರರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಧಾರವಾಡ: ಪರಿಷ್ಕರಿಸಿ ಪ್ರಕಟಿಸಿದ್ದ ಕನಿಷ್ಠ ವೇತನದ ಅಧಿಸೂಚನೆಯನ್ನು ತಡೆಹಿಡಿದಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮ ಪಂಚಾಯಿತಿ ಹಾಗೂ ಸ್ವಚ್ಛವಾಹಿನಿ ನೌಕರರು, ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಕನಿಷ್ಠ ವೇತನ ವ್ಯಾಪ್ತಿಗೆ ಬರುವ ಕೋಟ್ಯಂತರ ಕಾರ್ಮಿಕರ ವೇತನ ಪರಿಷ್ಕರಣೆ 2016ರಿಂದ ಬಾಕಿ ಉಳಿದಿತ್ತು. ಕಾರ್ಮಿಕರು ಹಾಗೂ ಸಂಘಟನೆಗಳ ನಿರಂತರ ಹೋರಾಟದ ಬಳಿಕ ಕನಿಷ್ಠ ವೇತನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಜಾರಿಗೆ ಬರುವ ಹಂತದಲ್ಲಿ ಅದನ್ನು ತಡೆಹಿಡಿದಿರುವುದು ಕಾರ್ಮಿಕರಿಗೆ ಮಾಡಿದ ಅನ್ಯಾಯ ಎಂದು ಕಿಡಿಕಾರಿದರು.

ಸುಪ್ರೀಂಕೋರ್ಟ್ ನಿರ್ದೇಶನದಂತೆ ನ್ಯಾಯಬದ್ಧ ಕನಿಷ್ಠ ವೇತನ ನಿಗದಿಪಡಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಇದರ ಆಧಾರದಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಸಮಿತಿ ಮೂರು–ನಾಲ್ಕು ವರ್ಷಗಳ ಕಾಲ ಹಲವು ಸಭೆಗಳನ್ನು ನಡೆಸಿ, ಬೆಲೆ ಏರಿಕೆ ಸೂಚ್ಯಂಕಗಳನ್ನು ಆಧರಿಸಿ ರಾಜ್ಯವನ್ನು ಮೂರು ವಲಯಗಳಾಗಿ ವಿಂಗಡಿಸಿ ಕನಿಷ್ಠ ವೇತನ ನಿಗದಿಪಡಿಸಿತ್ತು. ಆದರೆ ಅಧಿಸೂಚನೆ ಜಾರಿ ಹಂತಕ್ಕೆ ಬಂದ ಬಳಿಕ ತಡೆಹಿಡಿದಿರುವುದು ಕಾರ್ಮಿಕರ ಹಿತಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಬೇಕು. ಮರುಪರಿಷ್ಕರಣೆಗಾಗಿ ರಚಿಸಿರುವ ಸಚಿವ ಸಂಪುಟ ಉಪಸಮಿತಿಯನ್ನು ರದ್ದುಪಡಿಸಬೇಕು. ಸೇವಾ ಹಿರಿತನಕ್ಕೆ ಅನುಗುಣವಾಗಿ ವೇತನ ಹೆಚ್ಚಳ, ವಿವಿಧ ಭತ್ಯೆಗಳ ಹೆಚ್ಚಳ, ಇಡಗಂಟು, ಆರೋಗ್ಯ ವಿಮೆ ಹಾಗೂ ಗ್ರಾಚ್ಯುಟಿ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದರೊಂದಿಗೆ ತರಬೇತಿ ಪಡೆದಿರುವ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಕೆಲಸ ಹಾಗೂ ವೇತನ ನೀಡಬೇಕು. ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಕನಿಷ್ಠ ವೇತನ ಜಾರಿ ವಿಳಂಬಗೊಳಿಸದೆ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಕಾರ್ಮಿಕರ ಪರವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಜಿಲ್ಲಾ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಪ್ರಯತ್ನಿಸಲಾಗುವುದು. ಉಳಿದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ, ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಹುಜರಾತಿ, ಪ್ರಧಾನ ಕಾರ್ಯದರ್ಶಿ ಮಹೇಶ ಹುಲಗೋಡ, ವಿ.ಸಿ. ತುಪ್ಪದಗೌಡ್ರ, ನೀಲವ್ವ ಕುರುಬರ, ಎನ್.ಎಂ. ಪಾಟೀಲ ಸೇರಿದಂತೆ ಪದಾಧಿಕಾರಿಗಳು ವಹಿಸಿದ್ದರು.

“ಪರಿಷ್ಕೃತ ಕನಿಷ್ಠ ವೇತನ ಜಾರಿಯಾಗುವ ಹಂತದಲ್ಲಿತ್ತು. ಆದರೆ ಸರ್ಕಾರ ಅಧಿಸೂಚನೆ ತಡೆಹಿಡಿದಿರುವುದು ಕಾರ್ಮಿಕರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದು ಕೋಟಿಗೂ ಅಧಿಕ ಶ್ರಮಜೀವಿಗಳ ಬದುಕಿನ ಮೇಲೆ ಇದು ಮಹಾದ್ರೋಹವಾಗಿದೆ.”

ಮಹೇಶ ಪತ್ತಾರ, ರಾಜ್ಯ ಕಾರ್ಯದರ್ಶಿ, ಸಿಐಟಿಯು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img