ಬೆಂಗಳೂರು: ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ರಜೆ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಮಹಿಳಾ ನೌಕರರು ಮುಟ್ಟಿನ ರಜೆ ಪಡೆಯಲು ಮೇಲಾಧಿಕಾರಿಗಳ ಅನುಮೋದನೆಗಾಗಿ ಕಾಯಬೇಕಾಗಿಲ್ಲ. ‘ಕರ್ತವ್ಯ’ ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ದಾಖಲಿಸಿದ ತಕ್ಷಣ ರಜೆ ಸ್ವಯಂಚಾಲಿತವಾಗಿ ಮಂಜೂರಾಗಲಿದೆ. ಹೊಸ ವ್ಯವಸ್ಥೆಯನ್ನು ಅಕ್ಟೋಬರ್ 5ರಿಂದಲೇ ಜಾರಿಗೆ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮೇಲಾಧಿಕಾರಿಗಳ ಅನುಮೋದನೆ ಇನ್ಮುಂದೆ ಅಗತ್ಯವಿಲ್ಲ
ಈ ಹಿಂದೆ ಮಹಿಳಾ ಸರ್ಕಾರಿ ನೌಕರರು ತಿಂಗಳಿಗೆ ಒಂದು ದಿನದ ಮುಟ್ಟಿನ ರಜೆ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ ಮೇಲಾಧಿಕಾರಿಗಳ ಅನುಮೋದನೆ ಪಡೆಯಬೇಕಿತ್ತು. ಕೆಲವು ಸಂದರ್ಭಗಳಲ್ಲಿ ರಜೆ ಮಂಜೂರಾತಿ ವಿಳಂಬವಾಗುತ್ತಿರುವುದು ಹಾಗೂ ರಜೆಯ ಅಗತ್ಯವನ್ನು ಪ್ರಶ್ನಿಸಲಾಗುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದವು. ಇದರಿಂದ ಅಗತ್ಯವಿರುವ ಸಮಯದಲ್ಲಿ ರಜೆ ಪಡೆಯಲು ಮಹಿಳಾ ನೌಕರರು ಸಮಸ್ಯೆ ಎದುರಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿರುವ ಸರ್ಕಾರ, ‘ಕರ್ತವ್ಯ’ ಆ್ಯಪ್ ಮೂಲಕ ಮುಟ್ಟಿನ ರಜೆ ಅರ್ಜಿ ಸಲ್ಲಿಸಿದ ತಕ್ಷಣವೇ ಸ್ವಯಂಚಾಲಿತವಾಗಿ ಮಂಜೂರಾಗುವ ವ್ಯವಸ್ಥೆ ಕಲ್ಪಿಸಿದೆ.
ಯಾರಿಗೆ ಸಿಗಲಿದೆ ಮುಟ್ಟಿನ ರಜೆ?
18ರಿಂದ 52 ವರ್ಷದೊಳಗಿನ ಅರ್ಹ ಮಹಿಳಾ ಸರ್ಕಾರಿ ನೌಕರರು ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಪಡೆಯಬಹುದು. ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ.
ಹೊಸ ವ್ಯವಸ್ಥೆಯ ಪ್ರಮುಖ ನಿಯಮಗಳು
• ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಪಡೆಯಬಹುದು.
• ‘ಕರ್ತವ್ಯ’ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ರಜೆ ಸ್ವಯಂಚಾಲಿತವಾಗಿ ಮಂಜೂರಾಗಲಿದೆ.
• ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಅಗತ್ಯವಿಲ್ಲ.
• ಒಂದು ತಿಂಗಳಲ್ಲಿ ಬಳಸದ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲು ಸಾಧ್ಯವಿಲ್ಲ.
• ಮುಟ್ಟಿನ ರಜೆಯನ್ನು ಸಂಗ್ರಹಿಸಿಟ್ಟುಕೊಳ್ಳಲು ಅವಕಾಶವಿಲ್ಲ.
• ಇತರೆ ರಜೆಗಳೊಂದಿಗೆ ಸೇರಿಸಿ ಅಥವಾ ಹೊಂದಾಣಿಕೆ ಮಾಡಿಕೊಂಡು ಪಡೆಯಲು ಅವಕಾಶವಿಲ್ಲ.
• ನಿಯಮಾನುಸಾರ ಸಲ್ಲಿಸಿದ ಮುಟ್ಟಿನ ರಜೆ ಅರ್ಜಿಯನ್ನು ತಿರಸ್ಕರಿಸಲು ಅಥವಾ ತಡೆಹಿಡಿಯಲು ಮೇಲಾಧಿಕಾರಿಗಳಿಗೆ ವಿವೇಚನಾಧಿಕಾರ ಇರುವುದಿಲ್ಲ.
2025ರ ಡಿಸೆಂಬರ್‌ನಿಂದಲೇ ಮುಟ್ಟಿನ ರಜೆ
ರಾಜ್ಯ ಸರ್ಕಾರ 2025ರ ಡಿಸೆಂಬರ್‌ನಿಂದ ಸರ್ಕಾರಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ಸೌಲಭ್ಯ ಜಾರಿಗೊಳಿಸಿತ್ತು. ಇದೀಗ ರಜೆ ಮಂಜೂರಾತಿ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಮೂಲಕ ಮೇಲಾಧಿಕಾರಿಗಳ ಅನುಮೋದನೆಯ ಅಗತ್ಯವನ್ನು ತೆಗೆದುಹಾಕಲಾಗಿದೆ.



