ಬೆಂಗಳೂರು: ರಾಜ್ಯದಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಕಿಂಗ್ಪಿನ್ ಪ್ರಶಾಂತ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಈಗಾಗಲೇ ಎಸ್ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಪ್ರಶಾಂತ್ನನ್ನು ಇದೀಗ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಔಷಧಗಳನ್ನು ಪೂರೈಸುವುದಾಗಿ ನಂಬಿಸಿ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿದ ಆರೋಪ ಪ್ರಶಾಂತ್ ಮೇಲಿದೆ. ಈ ಸಂಬಂಧ ದೆಹಲಿಯ ಮೋತಿಲಾಲ್ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ದಾಖಲಾದ ದಿನದಿಂದಲೂ ಪೊಲೀಸರು ಪ್ರಶಾಂತ್ಗಾಗಿ ಹುಡುಕಾಟ ನಡೆಸುತ್ತಿದ್ದರು.
ಇತ್ತೀಚೆಗೆ ನಕಲಿ ಔಷಧ ದಂಧೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರಶಾಂತ್ನನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಿ ಬಾಡಿ ವಾರೆಂಟ್ ಮೂಲಕ ಆತನನ್ನು ವಶಕ್ಕೆ ಪಡೆಯಲು ಅನುಮತಿ ಪಡೆದಿದ್ದಾರೆ.
ಅದರಂತೆ ಮೋತಿಲಾಲ್ ಬಾಗ್ ಪೊಲೀಸರು ಪ್ರಶಾಂತ್ನನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದು, 2 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ. ನಕಲಿ ಔಷಧ ದಂಧೆಯ ಪ್ರಮುಖ ಆರೋಪಿಯಾಗಿರುವ ಪ್ರಶಾಂತ್ಗೆ ಇದೀಗ ದೆಹಲಿ ವಂಚನೆ ಪ್ರಕರಣವೂ ಸುತ್ತಿಕೊಂಡಿದೆ.









