ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇತ್ತೀಚೆಗೆ ಇಳಿಕೆ ಕಂಡುಬಂದಿದ್ದು, ಗ್ರಾಹಕರು ಆಭರಣ ಖರೀದಿಗೆ ಮುಂದಾಗಲು ಇದು ಸೂಕ್ತ ಸಮಯ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರು ಹಾಗೂ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಅಧ್ಯಕ್ಷ ಡಾ. ಟಿ.ಎ. ಶರವಣ ಹೇಳಿದ್ದಾರೆ.
ಜನವರಿ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಅಂದಾಜಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10 ತಿಂಗಳಲ್ಲೇ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆಯಾಗಿದೆ. ಹೀಗಾಗಿ ಚಿನ್ನ ಖರೀದಿಸಲು ಇದು ಉತ್ತಮ ಸಮಯ ಎಂದು ಗ್ರಾಹಕರಿಗೆ ಸಲಹೆ ನೀಡಿದ್ದಾರೆ.
ಡಿಸೆಂಬರ್ 9ರಂದು ನಡೆಯಲಿರುವ ಅಮೆರಿಕದ ಫೆಡರಲ್ ರಿಸರ್ವ್ ಸಭೆಯಲ್ಲಿ ಬಡ್ಡಿದರಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಬಡ್ಡಿದರ ಕಡಿಮೆಯಾದರೆ ಚಿನ್ನದ ಬೆಲೆ ಏರಿಕೆಯಾಗಬಹುದು. ಬಡ್ಡಿದರ ಹೆಚ್ಚಾದರೆ ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ ವೇಳೆಗೆ ಚಿನ್ನದ ಬೆಲೆಯಲ್ಲಿ ಇನ್ನೂ ಸುಮಾರು ಶೇ.5ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ ಜನವರಿ ಬಳಿಕ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಮಾರ್ಚ್ ವರೆಗೂ ಈ ಏರಿಕೆ ಮುಂದುವರಿಯಬಹುದು ಎಂದು ಶರವಣ ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ನಿಂತ ಬಳಿಕವೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಚಿನ್ನ ಖರೀದಿಸುವ ಮುನ್ನ ಎಚ್ಚರಿಕೆ ವಹಿಸಿ:
ಇದೇ ವೇಳೆ ಚಿನ್ನದ ಆಭರಣಗಳ ಖರೀದಿಯಲ್ಲಿ ಗ್ರಾಹಕರು ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶರವಣ ಸಲಹೆ ನೀಡಿದ್ದಾರೆ. ಚಿನ್ನದ ತೂಕ ಹೆಚ್ಚಿಸಲು ರೀನಿಯಂ, ಇರಿಡಿಯಂನಂತಹ ಲೋಹಗಳನ್ನು ಬಳಸಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿರುವ ಅವರು, ಚಿನ್ನ ಖರೀದಿಸುವಾಗ ಹಾಲ್ಮಾರ್ಕ್ ಜೊತೆಗೆ HUID ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ತಿಳಿಸಿದ್ದಾರೆ.
ಆಭರಣ ತಯಾರಕರು, ಮಾರಾಟಗಾರರು ಹಾಗೂ ಹಾಲ್ಮಾರ್ಕ್ಗೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಬಿಲ್ ಇಲ್ಲದೆ ಚಿನ್ನ ಖರೀದಿಸಬಾರದು. ಜಿಎಸ್ಟಿ ಪಾವತಿಸಿದ ಬಳಿಕ ಅಧಿಕೃತ ಬಿಲ್ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.
ಬಿಲ್ನಲ್ಲಿರುವ ಚಿನ್ನದ ತೂಕವನ್ನು ಆಭರಣದ ನೈಜ ತೂಕದೊಂದಿಗೆ ಹೋಲಿಕೆ ಮಾಡಬೇಕು. 18 ಕ್ಯಾರಟ್ ಅಥವಾ 22 ಕ್ಯಾರಟ್ ಚಿನ್ನ ಎಂಬ ಶುದ್ಧತೆಯ ವಿವರ ಬಿಲ್ನಲ್ಲಿ ನಮೂದಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಕೆಲವು ಮಳಿಗೆಗಳು ನೀಡುವ ಆಕರ್ಷಕ ರಿಯಾಯಿತಿ ಹಾಗೂ ವಿಶೇಷ ಆಫರ್ಗಳಿಗೆ ಮರುಳಾಗಿ ಮೋಸ ಹೋಗಬಾರದು. ಗ್ರಾಹಕರು ತಮಗೆ ವಿಶ್ವಾಸವಿರುವ ಆಭರಣ ಮಳಿಗೆಗಳಲ್ಲಿ ಸಂಪೂರ್ಣ ಮಾಹಿತಿ ಪಡೆದು ಚಿನ್ನ ಖರೀದಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.









