HomeKarnataka Newsಕ್ರೀಡಾಪಟುಗಳಿಗೆ ಸರ್ಕಾರದ ಭರ್ಜರಿ ಪ್ರೋತ್ಸಾಹ: ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಕೋಟಿ ಕೋಟಿ ನಗದು

ಕ್ರೀಡಾಪಟುಗಳಿಗೆ ಸರ್ಕಾರದ ಭರ್ಜರಿ ಪ್ರೋತ್ಸಾಹ: ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಕೋಟಿ ಕೋಟಿ ನಗದು

For Dai;y Updates Join Our whatsapp Group

ಬೆಂಗಳೂರು: ಏಷ್ಯನ್ ಗೇಮ್ಸ್-2026ರಲ್ಲಿ ಪದಕ ಗೆದ್ದು ದೇಶ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಕ್ರೀಡಾಪಟುಗಳಿಗೆ ಆರ್ಥಿಕ ಪ್ರೋತ್ಸಾಹ, ಉದ್ಯೋಗ ಭದ್ರತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಅಗತ್ಯ ನೆರವು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಡಾ. ಜಿ. ಪರಮೇಶ್ವರ್ ವಿವರಿಸಿದರು.

ಪದಕ ವಿಜೇತರಿಗೆ ಬಹುಮಾನ ಹೆಚ್ಚಳ

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರದ ಮೊತ್ತವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಿಸಿದೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ ₹35 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹25 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹15 ಲಕ್ಷ ನಗದು ಪುರಸ್ಕಾರ ನೀಡಲಾಗುತ್ತಿತ್ತು.

ಪರಿಷ್ಕೃತ ಮೊತ್ತದ ಪ್ರಕಾರ ಇನ್ನು ಮುಂದೆ:

  • ಚಿನ್ನದ ಪದಕ – ₹1 ಕೋಟಿ
  • ಬೆಳ್ಳಿ ಪದಕ – ₹75 ಲಕ್ಷ
  • ಕಂಚಿನ ಪದಕ – ₹50 ಲಕ್ಷ

ನಗದು ಪುರಸ್ಕಾರ ನೀಡಲಾಗುವುದು.

ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಎಂಟು ಕ್ರೀಡಾಪಟುಗಳಿಗೆ ಈ ಪರಿಷ್ಕೃತ ಬಹುಮಾನ ಸಿಗಲಿದೆ. ಇದರ ಜೊತೆಗೆ ಏಷ್ಯನ್ ಗೇಮ್ಸ್-2026ರಲ್ಲಿ ಭಾಗವಹಿಸಿದಕ್ಕಾಗಿ ಈ ಎಂಟು ಪದಕ ವಿಜೇತರಿಗೆ ತಲಾ ₹5 ಲಕ್ಷ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುವುದು.

ಕ್ರೀಡಾಪಟುಗಳ ಸಾಧನೆಗೆ ತಕ್ಕ ಗೌರವ ನೀಡುವುದರ ಜೊತೆಗೆ, ಭವಿಷ್ಯದ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

20 ಕ್ರೀಡಾಪಟುಗಳಿಗೂ ತಲಾ ₹5 ಲಕ್ಷ

ಏಷ್ಯನ್ ಗೇಮ್ಸ್-2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ 20 ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ನಗದು ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವುದೇ ಮಹತ್ವದ ಸಾಧನೆಯಾಗಿರುವ ಹಿನ್ನೆಲೆಯಲ್ಲಿ, ಪದಕ ಗೆದ್ದವರ ಜತೆಗೆ ರಾಜ್ಯವನ್ನು ಪ್ರತಿನಿಧಿಸಿದ ಎಲ್ಲ ಕ್ರೀಡಾಪಟುಗಳನ್ನೂ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರದ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಅವಕಾಶ ಕಲ್ಪಿಸಲಾಗಿದೆ. ಅರ್ಹ ಹಾಗೂ ಆಸಕ್ತ ಪದಕ ವಿಜೇತ ಕ್ರೀಡಾಪಟುಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನೇರವಾಗಿ ನೇಮಕ ಮಾಡಲು ಅವಕಾಶ ನೀಡಲಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಸಾಧಕರಿಗೆ ಸರ್ಕಾರಿ ಸೇವೆಯಲ್ಲಿ ಅವಕಾಶ ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

‘ಗುರಿ: ಒಲಿಂಪಿಕ್ಸ್’ ಯೋಜನೆಗೆ ನಾಲ್ವರು ಸೇರ್ಪಡೆ

ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭಾಗವಹಿಸುವಿಕೆ ಹಾಗೂ ಸಾಧನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿರುವ ‘ಗುರಿ: ಒಲಿಂಪಿಕ್ಸ್’ ಯೋಜನೆಯಡಿ 2026-27ನೇ ಸಾಲಿಗೆ ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರ ಪೈಕಿ ನಾಲ್ವರು ಕ್ರೀಡಾಪಟುಗಳನ್ನು ಸೇರ್ಪಡೆ ಮಾಡಲಾಗಿದೆ.

ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್ ಹಾಗೂ ಶಿಲ್ಪಾ ಕೆ.ಎಸ್. ಅವರನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಸಿದ್ಧತೆ, ತರಬೇತಿ ಹಾಗೂ ಇತರ ಅಗತ್ಯಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುವುದು.

ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ

ಸಾಧಕ ಕ್ರೀಡಾಪಟುಗಳ ಭವಿಷ್ಯಕ್ಕೆ ಉದ್ಯೋಗ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ 2% ಮೀಸಲಾತಿ ನೀಡಲಾಗಿದೆ. 2026ರ ಅಕ್ಟೋಬರ್ 3ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರದ ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಸಾಧಕ ಕ್ರೀಡಾಪಟುಗಳಿಗೆ 2% ಮೀಸಲಾತಿ ಕಲ್ಪಿಸಲಾಗಿದೆ.

ಕ್ರೀಡಾ ಸಾಧನೆಯ ಬಳಿಕ ಉದ್ಯೋಗದ ಬಗ್ಗೆ ಆತಂಕಪಡಬೇಕಾದ ಪರಿಸ್ಥಿತಿ ಕ್ರೀಡಾಪಟುಗಳಿಗೆ ಇರಬಾರದು. ಕ್ರೀಡಾ ಸಾಧನೆಗೆ ಗೌರವ ನೀಡುವುದರ ಜತೆಗೆ ಅವರ ಮುಂದಿನ ಬದುಕಿಗೂ ಭದ್ರತೆ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಆರ್ಥಿಕ ನೆರವು, ಗುಣಮಟ್ಟದ ತರಬೇತಿ, ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಿದ್ಧತೆ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಕರ್ನಾಟಕವನ್ನು ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img