2018ರ ಸ್ಯಾಂಡ್ಪೇಪರ್ ಗೇಟ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಡೆದಿದ್ದ ಬಾಲ್ ಟ್ಯಾಂಪರಿಂಗ್ ಪ್ರಕರಣದ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ನೀಡಿರುವ ಹೇಳಿಕೆಗಳಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ. ಅಂದು ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬ ಆಟಗಾರನಿಗೂ ಬಾಲ್ ಟ್ಯಾಂಪರಿಂಗ್ ಬಗ್ಗೆ ತಿಳಿದಿತ್ತು ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
2018ರಲ್ಲಿ ನಡೆದ ಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಡಿವಿಲಿಯರ್ಸ್ ಮೊದಲ ಇನ್ನಿಂಗ್ಸ್ನಲ್ಲಿ 64 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 63 ರನ್ ಗಳಿಸಿದ್ದರು. ಅವರ ಪ್ರಕಾರ, ಬಾಲ್ ಟ್ಯಾಂಪರಿಂಗ್ ಘಟನೆ ಕೇಪ್ಟೌನ್ ಟೆಸ್ಟ್ಗೆ ಮಾತ್ರ ಸೀಮಿತವಾಗಿರಲಿಲ್ಲ. ಸರಣಿಯ ಮೊದಲ ಪಂದ್ಯವಾದ ಡರ್ಬನ್ ಟೆಸ್ಟ್ನಲ್ಲಿಯೂ ಚೆಂಡಿನ ಸ್ವರೂಪವನ್ನು ಬದಲಿಸುವ ಪ್ರಯತ್ನ ನಡೆದಿತ್ತು ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಡಿವಿಲಿಯರ್ಸ್, ಯಾರನ್ನೂ ವೈಯಕ್ತಿಕವಾಗಿ ಗುರಿಯಾಗಿಸುವ ಉದ್ದೇಶ ತನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಸ್ಮಾನ್ ಖವಾಜಾ ತಮ್ಮ ಪುಸ್ತಕ ಬಿಡುಗಡೆ ಮಾಡಿರುವುದರಲ್ಲಿ ತಪ್ಪಿಲ್ಲ. ಆದರೆ 2026ರಲ್ಲಿ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಸಮಯ ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆಟಗಾರರ ಪರಿಸ್ಥಿತಿಯ ಬಗ್ಗೆ ಅನುಕಂಪವಿದೆ ಎಂದಿರುವ ಅವರು, ಮೈದಾನದಲ್ಲಿ ನಡೆದ ಅಕ್ರಮ ಕೃತ್ಯಕ್ಕೆ ಅಥವಾ ಅದಕ್ಕೂ ಮೊದಲು ಇಂತಹ ಘಟನೆಗಳು ನಡೆದಿದ್ದರೆ ಅವುಗಳಿಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಪೋರ್ಟ್ ಎಲಿಜಬೆತ್ ಟೆಸ್ಟ್ನಲ್ಲಿಯೂ ಬಾಲ್ ಟ್ಯಾಂಪರಿಂಗ್ ನಡೆದಿತ್ತು ಎಂಬುದನ್ನು ಈಗ ಎಲ್ಲರೂ ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಆದರೆ ಡರ್ಬನ್ ಟೆಸ್ಟ್ನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು ಎಂಬುದು ತಮ್ಮ ನಂಬಿಕೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಈ ಕುರಿತು ಆ ಪಂದ್ಯದ ವಿಡಿಯೋ ದೃಶ್ಯಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಅವರು ತಿಳಿಸಿದ್ದಾರೆ.
‘ತಂಡದ ಪ್ರತಿಯೊಬ್ಬರಿಗೂ ಈ ಬಗ್ಗೆ ತಿಳಿದಿತ್ತು’
ಸ್ಯಾಂಡ್ಪೇಪರ್ ಬಳಸಿದ ವಿಚಾರದ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಪ್ರಶ್ನಿಸಿರುವ ಡಿವಿಲಿಯರ್ಸ್, ಚೆಂಡಿನ ಸ್ವರೂಪ ಬದಲಿಸಲು ಯಾವ ವಸ್ತುವನ್ನು ಬಳಸಲಾಯಿತು ಎಂಬುದಕ್ಕಿಂತಲೂ ನಿಯಮ ಉಲ್ಲಂಘಿಸುವ ನಿರ್ಧಾರವೇ ಪ್ರಮುಖ ವಿಚಾರ ಎಂದು ಹೇಳಿದ್ದಾರೆ.
ಮೈದಾನದಲ್ಲಿ ಅಕ್ರಮ ಎಸಗಲು ಮೊದಲೇ ಯೋಜನೆ ರೂಪಿಸಲಾಗಿತ್ತು ಎಂಬುದೇ ಇಲ್ಲಿ ಮುಖ್ಯ. ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬ ಆಟಗಾರನಿಗೂ ಈ ಬಗ್ಗೆ ತಿಳಿದಿತ್ತು ಎಂಬುದರಲ್ಲಿ ತಮಗೆ ಶೇ.100ರಷ್ಟು ಖಚಿತತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
2018ರ ಕೇಪ್ಟೌನ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಚೆಂಡಿನ ಸ್ವರೂಪ ಬದಲಿಸಲು ಸ್ಯಾಂಡ್ಪೇಪರ್ ಬಳಸಿದ್ದು ಬಹಿರಂಗವಾಗಿತ್ತು. ಈ ಪ್ರಕರಣದ ಬಳಿಕ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬ್ಯಾನ್ಕ್ರಾಫ್ಟ್ ಶಿಕ್ಷೆಗೆ ಒಳಗಾಗಿದ್ದರು. ಇದೀಗ ಡಿವಿಲಿಯರ್ಸ್ ಅವರ ಹೇಳಿಕೆಗಳಿಂದ ಹಲವು ವರ್ಷಗಳ ಹಿಂದಿನ ವಿವಾದ ಮತ್ತೆ ಚರ್ಚೆಗೆ ಬಂದಿದೆ.









