ವಿಜಯಸಾಕ್ಷಿ ಸುದ್ದಿ, ಗದಗ
ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ₹59.80 ಕೋಟಿ ಅನುದಾನ ಬಿಡುಗಡೆಯಾಗಿದೆ. “ನೀರು ಬಂದರೆ ಮೋದಿ, ಬರದಿದ್ದರೆ ಶಾಸಕರು” ಎಂದು ಹೇಳುವ ಕಾಂಗ್ರೆಸ್ ಮುಖಂಡರು, ನೀರಿನ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಒಪ್ಪಿಕೊಳ್ಳಬೇಕು ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆಗೆ ಕೇವಲ ಕಾಂಗ್ರೆಸ್ ಮಾತ್ರ ಶ್ರಮಿಸಿದೆ ಎನ್ನುವ ಕಾಂಗ್ರೆಸ್ ಕಾರ್ಯಕರ್ತರು, ಈ ಹಿಂದೆ ಬಿ. ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಪೂರೈಸಿದ್ದನ್ನು ಹಾಗೂ ರೈಲ್ವೆ ಮೂಲಕ ನೀರು ತಂದು ಜನರಿಗೆ ಪೂರೈಸಿದ ಇತಿಹಾಸವನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ಗದಗ-ಬೆಟಗೇರಿ ಅವಳಿ ನಗರದ 2ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಿದ್ದು ಬಿಜೆಪಿ. ಶ್ರೀಶೈಲಪ್ಪ ಬಿದರೂರ ಶಾಸಕರಾಗಿದ್ದ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ನೀರಿನ ಯೋಜನೆಗೆ ಅಂದಿನ ಸರ್ಕಾರ ₹200 ಕೋಟಿ ಅನುದಾನ ನೀಡಿತ್ತು ಎಂದು ಹೇಳಿದರು.
ಅದಾದ ಬಳಿಕ ಹಮ್ಮಿಗಿ ಬ್ಯಾರೇಜ್‌ನಿಂದ ನೀರು ತರುವ 24/7 ಕುಡಿಯುವ ನೀರಿನ ಯೋಜನೆಯನ್ನು 2017ರ ಜೂನ್ 4ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದರು. ಅಪೂರ್ಣ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ 13 ನಗರಸಭೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಎರಡು ದಿನ ಜೈಲು ಅನುಭವಿಸುವಂತೆ ಮಾಡಲಾಗಿತ್ತು. ಈ ಪ್ರಕರಣದಿಂದ ನಾಲ್ಕು ವರ್ಷ ನ್ಯಾಯಾಲಯಕ್ಕೆ ಅಲೆದಾಡಬೇಕಾಯಿತು ಎಂದು ರಾಘವೇಂದ್ರ ಯಳವತ್ತಿ ಹೇಳಿದರು.
ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮೂರು ವರ್ಷ ಎಲ್ಲಿದ್ದರು ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಾರೆ. ಹಾಗಾದರೆ ಆ ಅವಧಿಯಲ್ಲಿ ಅವರದೇ ಸರ್ಕಾರವಿದ್ದರೂ ನೀರಿನ ಸಮಸ್ಯೆ ಏಕೆ ಪರಿಹರಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸದಿಂದ ಕಾದಿದ್ದೆವು. ಅದು ಈಡೇರದ ಹಿನ್ನೆಲೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಯಿತು ಎಂದರು.
ಅವಳಿ ನಗರದ ನೀರಿನ ಸಮಸ್ಯೆಯನ್ನು ಗಮನಿಸಿ ಸಂಸದರು ಅಮೃತ ಯೋಜನೆಯಡಿ ₹59.80 ಕೋಟಿ ಅನುದಾನ ತಂದಿದ್ದಾರೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಗದಗ-ಬೆಟಗೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ಮಾತನಾಡಿ, ಬಿಜೆಪಿ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಎಚ್.ಕೆ. ಪಾಟೀಲರು ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಹೇಳುತ್ತಿದ್ದಾರೆ. ಕಳೆದ 40 ವರ್ಷಗಳಿಂದಲೂ ನೀರಿನ ಸಮಸ್ಯೆ ಪರಿಹರಿಸುವುದರಲ್ಲೇ ಕಾಲ ಕಳೆಯಲಾಗಿದೆ ಎಂದು ಟೀಕಿಸಿದರು.
ಐವರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ 40 ನಗರಸಭೆ ಸದಸ್ಯರಿದ್ದರೂ ಶಾಸಕ ಎಚ್.ಕೆ. ಪಾಟೀಲರು ಎಲ್ಲ ಸದಸ್ಯರನ್ನು ಕರೆದು ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿಲ್ಲ. ನಗರಸಭೆ ಸದಸ್ಯರಿಗೆ ಕನಿಷ್ಠ ಗೌರವವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿ.ಸಿ. ಪಾಟೀಲರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಅಧಿಕಾರಿಗಳನ್ನು ಗದಗಕ್ಕೆ ಕರೆಸಿ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗಿತ್ತು. ಕಾಂಗ್ರೆಸ್ ನಾಯಕರು ನೀರಿನ ಸಮಸ್ಯೆ ಕುರಿತು ಸುಳ್ಳು ಹೇಳುತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಯಾರು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ ಎಂಬುದನ್ನು ದಾಖಲೆಗಳ ಸಮೇತ ಚರ್ಚಿಸೋಣ ಎಂದು ಅನಿಲ ಅಬ್ಬಿಗೇರಿ ಸವಾಲು ಹಾಕಿದರು.
ಅನುದಾನ ಹಂಚಿಕೆಯಲ್ಲೂ ತಾರತಮ್ಯ ಆರೋಪ
ನಗರಸಭೆ ಸದಸ್ಯೆ ಉಷಾ ದಾಸರ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ ನಗರಸಭೆಗೆ ಬಂದ ಅನುದಾನವನ್ನು ಎಲ್ಲ ಪಕ್ಷಗಳ ಸದಸ್ಯರ ವಾರ್ಡ್‌ಗಳಿಗೂ ಸಮಾನವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈಗ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ₹1 ಕೋಟಿ ಅನುದಾನ ನೀಡಿದರೆ, ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ₹50 ಲಕ್ಷ ನೀಡುತ್ತಿದ್ದಾರೆ ಎಂದು ಆರೋಪಿಸಿದರು.



