ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಬರಗಾಲದ ಬಿರುಬಿಸಿಲು, ಜಮೀನಿನಲ್ಲಿ ನೀರಿನ ಮೂಲದ ಕೊರತೆ. ಕಣ್ಣೆದುರೇ ಒಣಗುತ್ತಿದ್ದ ಮೆಣಸಿನಕಾಯಿ ಬೆಳೆಯನ್ನು ಉಳಿಸಿಕೊಳ್ಳಲೇಬೇಕೆಂಬ ಛಲದಿಂದ ಲಕ್ಷ್ಮೇಶ್ವರದ ಯುವ ರೈತ ಪ್ರಕಾಶ ಮುಳಗುಂದ ೪೦೦ಕ್ಕೂ ಅಧಿಕ ಟ್ಯಾಂಕರ್ ನೀರು ಹರಿಸಿ ಬೆಳೆ ಚೇತರಿಸಿಕೊಂಡಿದ್ದಾರೆ.
ಲಕ್ಷ್ಮೇಶ್ವರದಿಂದ 7-8 ಕಿ.ಮೀ. ದೂರದ ಜಮೀನಿನಲ್ಲಿ ನಾಲ್ಕು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿರುವ ಪ್ರಕಾಶ ಅವರ ಜಮೀನಿನಲ್ಲಿ ಬೋರ್‌ವೆಲ್, ಕೆರೆ ಅಥವಾ ಹಳ್ಳ ಯಾವುದೂ ಇಲ್ಲ. ಹೀಗಿದ್ದರೂ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಕೈಬಿಡದೆ ಸ್ನೇಹಿತರು ಹಾಗೂ ಬೀಗರ ನೆರವಿನಿಂದ ದೂರದ ಬೋರ್‌ವೆಲ್‌ಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಬೆಳೆಗೆ ಹರಿಸುತ್ತಿದ್ದಾರೆ.
ನೀರಿನ ಕೊರತೆಯಿಂದ ಮೆಣಸಿನಕಾಯಿ ಗಿಡಗಳ ಹೂವು ಹಾಗೂ ಕಾಯಿಗಳು ಉದುರತೊಡಗಿದ್ದವು. ಬೆಳೆ ಕೈತಪ್ಪಿದರೆ ವರ್ಷದ ಆದಾಯಕ್ಕೆ ಹೊಡೆತ ಬೀಳಲಿದೆ ಎಂಬ ಆತಂಕದಿಂದ ಪ್ರಕಾಶ ನೀರುಣಿಸುವುದನ್ನು ಮುಂದುವರಿಸಿದ್ದಾರೆ. ಟ್ಯಾಂಕರ್ ಹಾಗೂ ನಿರ್ವಹಣಾ ವೆಚ್ಚ ಸೇರಿ ಇದುವರೆಗೆ ಸುಮಾರು ₹2 ಲಕ್ಷ ಖರ್ಚು ಮಾಡಿದ್ದಾರೆ.
ರೈತನ ಸತತ ಪ್ರಯತ್ನದ ಫಲವಾಗಿ ಮೂರು ತಿಂಗಳ ಮೆಣಸಿನಕಾಯಿ ಬೆಳೆ ಇದೀಗ ಚೇತರಿಸಿಕೊಂಡು ಫಸಲು ನೀಡುವ ಹಂತಕ್ಕೆ ಬಂದಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಬೆಳೆ ಉಳಿಸಿಕೊಂಡರೆ ಮಾಡಿದ ಖರ್ಚು ಮರಳುವ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಮೆಣಸಿನಕಾಯಿಗೆ ಕ್ವಿಂಟಲ್‌ಗೆ ₹೭೦ ಸಾವಿರಕ್ಕೂ ಅಧಿಕ ಬೆಲೆ ಇದೆ ಎನ್ನಲಾಗುತ್ತಿದ್ದು, ದರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯೂ ಇದೆ. ಎಕರೆಗೆ 3-4 ಕ್ವಿಂಟಲ್ ಫಸಲು ಬಂದರೂ ನೀರಿಗಾಗಿ ಮಾಡಿದ ಹೆಚ್ಚುವರಿ ಖರ್ಚಿಗೆ ಪ್ರತಿಫಲ ಸಿಗಬಹುದು ಎಂಬ ನಿರೀಕ್ಷೆ ರೈತರದ್ದಾಗಿದೆ.
“ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ಚಿಂತೆಯಾಗಿತ್ತು. ಉತ್ತಮ ಬೆಲೆ ಇರುವುದರಿಂದ ಟ್ಯಾಂಕರ್ ಮೂಲಕ ನೀರು ಹಾಕಲು ನಿರ್ಧರಿಸಿದೆ. ಈಗ ಬೆಳೆ ಚೇತರಿಸಿಕೊಂಡಿದ್ದು, ಮಳೆ ಹಾಗೂ ಹವಾಮಾನ ಅನುಕೂಲಕರವಾಗಿದ್ದರೆ ಉತ್ತಮ ಫಸಲು ಸಿಗುವ ನಿರೀಕ್ಷೆಯಿದೆ.” — ಪ್ರಕಾಶ ಮುಳಗುಂದ, ಬೆಳೆಗಾರ, ಲಕ್ಷ್ಮೇಶ್ವರ



