ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ-ನಿರ್ಮಾಪಕ ರಾಜ್ ನಿಡಿಮೋರು ದಂಪತಿಗೆ ಗಂಡು ಮಗು ಜನಿಸಿದೆ. ನವೆಂಬರ್ 19ರಂದು ಸಮಂತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ನವೆಂಬರ್ 20ರಂದು ಸಾಮಾಜಿಕ ಜಾಲತಾಣದ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತಮ್ಮ ಮುದ್ದಾದ ಮಗುವಿನ ಆಗಮನವನ್ನು ಸಮಂತಾ ವಿಶೇಷ ಫೋಟೋ ಮೂಲಕ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ತಮ್ಮ ಶಿಶುವಿನ ಪುಟ್ಟ ಬೆರಳುಗಳನ್ನು ಪ್ರೀತಿಯಿಂದ ಹಿಡಿದುಕೊಂಡಿರುವುದು ಕಂಡುಬಂದಿದೆ. ಈ ಮೂಲಕ ಜೀವನದ ಹೊಸ ಅಧ್ಯಾಯ ಆರಂಭಿಸಿರುವ ಸಂತಸವನ್ನು ದಂಪತಿ ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗೆ ‘ಅವರ್ ಬ್ಯೂಟಿಫುಲ್ ಬೇಬಿ ಬಾಯ್ ದೇವ್’ ಎಂಬ ಶೀರ್ಷಿಕೆ ನೀಡಿರುವ ಸಮಂತಾ, ಮಗುವಿನ ಆಗಮನದ ಖುಷಿಯನ್ನು ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾರೆ.
ತಾರೆಯರಿಂದ ಶುಭಾಶಯಗಳ ಮಹಾಪೂರ
ಸಮಂತಾ ತಾಯಿಯಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟ ವರುಣ್ ಧವನ್, ತಮನ್ನಾ ಭಾಟಿಯಾ, ವರಲಕ್ಷ್ಮಿ ಶರತ್ಕುಮಾರ್ ಸೇರಿದಂತೆ ಹಲವು ತಾರೆಯರು ದಂಪತಿಗೆ ಅಭಿನಂದನೆ ಸಲ್ಲಿಸಿ, ಪುಟ್ಟ ಮಗುವಿಗೆ ಪ್ರೀತಿ ಮತ್ತು ಶುಭ ಹಾರೈಸಿದ್ದಾರೆ.
2025ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ
ಸಮಂತಾ ಮತ್ತು ರಾಜ್ ನಿಡಿಮೋರು ಅವರು 2025ರ ಡಿಸೆಂಬರ್ 1ರಂದು ಕೊಯಮತ್ತೂರಿನ ಇಶಾ ಫೌಂಡೇಶನ್ನಲ್ಲಿ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಬಳಿಕ 2026ರ ಜೂನ್ನಲ್ಲಿ ನಡೆದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಸಮಂತಾ ತಾವು ತಾಯಿಯಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು. ತಾಯ್ತನವನ್ನು ಆನಂದಿಸಲು ಸಿನಿಮಾಗಳಿಂದ ಸ್ವಲ್ಪ ವಿರಾಮ ಪಡೆಯುವುದಾಗಿಯೂ ಹೇಳಿಕೊಂಡಿದ್ದರು.
ಈ ವಾರದ ಆರಂಭದಲ್ಲಷ್ಟೇ ದಂಪತಿ ತಮ್ಮ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು. ಇದೀಗ ಗಂಡು ಮಗುವಿನ ಆಗಮನದೊಂದಿಗೆ ಸಮಂತಾ ಮತ್ತು ರಾಜ್ ನಿಡಿಮೋರು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.









