ಬೆಂಗಳೂರು: ಒಂದು ಕಾಲದಲ್ಲಿ ದೇಶದ ಹೆಮ್ಮೆಯ ವಾಚ್ ಬ್ರ್ಯಾಂಡ್ ಆಗಿದ್ದ ಎಚ್ಎಂಟಿ (HMT) ವಾಚ್ಗಳಿಗೆ ಇದೀಗ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಎಚ್ಎಂಟಿ ವತಿಯಿಂದ ‘ಗಂಡಭೇರುಂಡ ಕನ್ನಡಿಗ’ ನೂತನ ವಾಚ್ ಸರಣಿಯನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಹಳೆಯ ಜನಪ್ರಿಯತೆಯನ್ನು ಮರಳಿ ಪಡೆಯುತ್ತಿರುವ ಎಚ್ಎಂಟಿ ವಾಚ್ಗಳ ಬೇಡಿಕೆ ಹೊಸ ತಲೆಮಾರಿನ ಗ್ರಾಹಕರಲ್ಲೂ ಹೆಚ್ಚಾಗಿದೆ.
ಆದರೆ, ಈ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು ಮಾರುಕಟ್ಟೆಯಲ್ಲಿ ನಕಲಿ ಎಚ್ಎಂಟಿ ವಾಚ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ಉತ್ಪನ್ನಗಳ ಮಾರಾಟ ತಡೆಯಲು ಕಂಪನಿ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದೆ.
₹290ರ ವಾಚ್ ಆರ್ಡರ್ ಮಾಡಿ ನಕಲಿ ಜಾಲ ಪತ್ತೆಹಚ್ಚಿದ ಸಿಎಂಡಿ
ಕಂಪನಿಯ ಬಳಿ ಸ್ಟಾಕ್ ಇಲ್ಲದ ಕೆಲವು ವಾಚ್ಗಳು ಆನ್ಲೈನ್ನಲ್ಲಿ ಮಾರಾಟಕ್ಕೆ ಲಭ್ಯವಿರುವುದನ್ನು ಎಚ್ಎಂಟಿ ಗಮನಿಸಿದೆ. ಇದರಿಂದ ಅನುಮಾನಗೊಂಡ ಕಂಪನಿಯ ಸಿಎಂಡಿ ರಮೇಶ್ ಅವರು ಸ್ವತಃ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಫ್ಲಿಪ್ಕಾರ್ಟ್ನಲ್ಲಿ ತಮ್ಮ ಹೆಸರಿನಲ್ಲೇ ವಾಚ್ ಒಂದನ್ನು ಆರ್ಡರ್ ಮಾಡಿದ್ದಾರೆ. ಪಾರ್ಸೆಲ್ ಮನೆಗೆ ಬಂದ ಬಳಿಕ ತೆರೆದು ನೋಡಿದಾಗ, ಕೇವಲ 290 ರೂಪಾಯಿಗೆ ಬಂದಿದ್ದ ವಾಚ್ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಅದು ಅಸಲಿ ಎಚ್ಎಂಟಿ ಉತ್ಪನ್ನವಲ್ಲ ಎಂಬುದು ಗೊತ್ತಾಗಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲಿ ನಕಲಿ ವಾಚ್ಗಳ ಮಾರಾಟ ನಡೆಯುತ್ತಿರುವುದಕ್ಕೆ ಕಂಪನಿ ಆಕ್ಷೇಪ ವ್ಯಕ್ತಪಡಿಸಿದೆ. ನಕಲಿ ಉತ್ಪನ್ನಗಳ ಮಾರಾಟ ತಡೆಯುವಂತೆ ಫ್ಲಿಪ್ಕಾರ್ಟ್ಗೆ ಎಚ್ಎಂಟಿ ಕಾನೂನು ನೋಟಿಸ್ ಜಾರಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲೂ ನಕಲಿ ವಾಚ್ ಮಾರಾಟ ಆರೋಪ
ಸಾಮಾಜಿಕ ಜಾಲತಾಣಗಳಲ್ಲಿಯೂ ಎಚ್ಎಂಟಿ ಹೆಸರಿನಲ್ಲಿ ನಕಲಿ ವಾಚ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲವು ಮಾರಾಟಗಾರರು ನಕಲಿ ಉತ್ಪನ್ನಗಳನ್ನು ‘ಎಚ್ಎಂಟಿ ರಿಫರ್ಬಿಷ್ಡ್ ವಾಚ್ಗಳು’ ಎಂದು ಪ್ರಚಾರ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
ಅಸಲಿ ಎಚ್ಎಂಟಿ ವಾಚ್ ಎಂದು ನಂಬಿ ಗ್ರಾಹಕರು ಇಂತಹ ಉತ್ಪನ್ನಗಳನ್ನು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಾಚ್ಗಳನ್ನು ಪ್ರಚಾರ ಮಾಡುತ್ತಿದ್ದ ಕೆಲವರಿಗೂ ಕಂಪನಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಮಳಿಗೆಯ ವಿರುದ್ಧವೂ ಕ್ರಮಕ್ಕೆ ಸಿದ್ಧತೆ
ಬೆಂಗಳೂರಿನ ಜೆ.ಪಿ. ನಗರದ ಕ್ಲಾಸಿಕ್ ಟೈಮ್ ಮಳಿಗೆಯಲ್ಲಿಯೂ ನಕಲಿ ಎಚ್ಎಂಟಿ ವಾಚ್ಗಳನ್ನು ಅಸಲಿ ಎಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಳಿಗೆಯ ಮಾಲೀಕರಿಗೂ ನೋಟಿಸ್ ನೀಡಲು ಕಂಪನಿ ಮುಂದಾಗಿದೆ.
ಚೀನಾ ಮಾರುಕಟ್ಟೆಯಿಂದ ನಕಲಿ ವಾಚ್ಗಳನ್ನು ತರಿಸಿ ಎಚ್ಎಂಟಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಕಂಪನಿ ಮತ್ತೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಇಂತಹ ಕೃತ್ಯಗಳು ಬ್ರ್ಯಾಂಡ್ನ ಮೌಲ್ಯ ಮತ್ತು ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ತರಬಹುದು ಎಂಬ ಆತಂಕವನ್ನು ಎಚ್ಎಂಟಿ ವ್ಯಕ್ತಪಡಿಸಿದೆ.
ಅಧಿಕೃತ ಮಳಿಗೆಗಳಲ್ಲೇ ವಾಚ್ ಖರೀದಿಸಲು ಮನವಿ
ನಕಲಿ ವಾಚ್ಗಳ ಮಾರಾಟದ ವಿರುದ್ಧ ಎಚ್ಎಂಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾನೂನು ಹೋರಾಟಕ್ಕೂ ಮುಂದಾಗಿದೆ. ನಕಲಿ ವಾಚ್ ಮಾರಾಟಗಾರರಿಗೆ ಸಿಎಂಡಿ ರಮೇಶ್ ಎಚ್ಚರಿಕೆ ನೀಡಿದ್ದು, ಗ್ರಾಹಕರು ಅಧಿಕೃತ ಮಾರಾಟ ಮಳಿಗೆಗಳಲ್ಲಿಯೇ ವಾಚ್ ಖರೀದಿಸುವಂತೆ ಮನವಿ ಮಾಡಿದ್ದಾರೆ.
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಎಂ.ಜಿ. ರಸ್ತೆ, ಬಳ್ಳಾರಿ ರಸ್ತೆ ಹಾಗೂ ಜಾಲಹಳ್ಳಿಯಲ್ಲಿರುವ ಎಚ್ಎಂಟಿ ಮ್ಯೂಸಿಯಂನಲ್ಲಿ ಅಧಿಕೃತವಾಗಿ ವಾಚ್ಗಳು ಲಭ್ಯವಿವೆ. ಈ ಮಳಿಗೆಗಳನ್ನು ಹೊರತುಪಡಿಸಿ ಬೇರೆಡೆ ಖರೀದಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಕಂಪನಿ ಸೂಚಿಸಿದೆ.









