ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆಗಳ ಮೂಲಕ ಡಂಬಳ ಸೇರಿದಂತೆ ಸುತ್ತಮುತ್ತಲಿನ ಕೆರೆಗಳಿಗೆ ತಕ್ಷಣ ನೀರು ಹರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೈ.ಎನ್. ಗೌಡರ ಆಗ್ರಹಿಸಿದರು.
ಡಂಬಳ ಹೋಬಳಿಯ ಡೋಣಿ ಗ್ರಾಮದ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆಯನ್ನು ಗುರುವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಯೋಜನೆ ನಿರ್ಮಾಣವಾಗಿದ್ದರೂ ಮುಂಡರಗಿ ತಾಲೂಕಿನ ರೈತರ ಜಮೀನುಗಳಿಗೆ ನೀರು ತಲುಪಿಲ್ಲ. ಪರಿಣಾಮ ಭೂಮಿ ಹಸಿರಾಗುವ ಬದಲು ರೈತರು ವರ್ಷದಿಂದ ವರ್ಷಕ್ಕೆ ಬರದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೂವಿನಹಡಗಲಿ ತಾಲೂಕಿನ ಬಲದಂಡೆ ಕಾಲುವೆ ಮೂಲಕ 2012ರಿಂದಲೇ ಸುಮಾರು 48 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದ್ದು, 22 ಕೆರೆಗಳನ್ನು ತುಂಬಿಸಲಾಗಿದೆ. ಆದರೆ ಡಂಬಳ, ತಾಮ್ರಗುಂಡಿ, ಜಂತಲಿ, ಶಿರೂರು, ಪೇಠಾಲೂರು ಸೇರಿದಂತೆ ಈ ಭಾಗದ ಕೆರೆಗಳಿಗೆ ನೀರು ಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.
ತಾಮ್ರಗುಂಡಿ–ಮೇವುಂಡಿ ಮಧ್ಯೆ ಕಾಲುವೆ ಕಳಪೆ ಕಾಮಗಾರಿಯಿಂದ ಹಾನಿಗೊಳಗಾಗಿದ್ದು, ತಕ್ಷಣ ದುರಸ್ತಿ ಕೈಗೊಂಡು ಕೆರೆಗಳಿಗೆ ನೀರು ಹರಿಸಬೇಕು. ಮಳೆ ಕೈಕೊಟ್ಟಿರುವುದರಿಂದ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಾವರಿ ಕಲ್ಪಿಸುವ ಬದಲು ಸೂಕ್ಷ್ಮ ಹನಿ ನೀರಾವರಿ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಲಾಭ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಡಂಬಳ, ಪೇಠಾಲೂರು, ಕದಾಂಪುರ, ಹಿರೇವಡ್ಡಟ್ಟಿ ಸೇರಿದಂತೆ ಹಲವು ಗ್ರಾಮಗಳು ನೀರಾವರಿ ವ್ಯಾಪ್ತಿಗೆ ಬರಬೇಕಾಗಿದ್ದರೂ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ರೈತರು ತಮ್ಮ ಜಮೀನುಗಳನ್ನು ಸೌರ ವಿದ್ಯುತ್ ಹಾಗೂ ಗಾಳಿ ವಿದ್ಯುತ್ ಯೋಜನೆಗಳಿಗೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಭೂಮಿಯ ಮಾಲೀಕರಾಗಿದ್ದರೂ ಇಂದು ಕೂಲಿ ಕಾರ್ಮಿಕರಾಗುವ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂಡರಗಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಒಣ ಬೇಸಾಯ ಪ್ರದೇಶಕ್ಕೆ ಪ್ರತಿ ಹೆಕ್ಟೇರ್ಗೆ ₹13 ಸಾವಿರ ಹಾಗೂ ನೀರಾವರಿ ಪ್ರದೇಶಕ್ಕೆ ₹26 ಸಾವಿರ ಪರಿಹಾರ ನೀಡಬೇಕು. ಜೊತೆಗೆ ಕೆರೆಗಳಿಗೆ ನೀರು ಹರಿಸಿ, ಸೌರ ವಿದ್ಯುತ್ ಉತ್ಪಾದನೆಯ ಆದಾಯದಲ್ಲಿ ರೈತರಿಗೆ ಕನಿಷ್ಠ ಶೇ.25ರಷ್ಟು ಪಾಲು ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಬೇರಪ್ಪ ಬಂಡಿ, ಚಂದ್ರು ಯಳಮಲಿ, ಮಂಜುನಾಥ ಸಂಜೀವಣ್ಣವರ, ಬಸವರಾಜ ಬಂಡಿ, ಉಮೇಶ ಹೆಗ್ಗಪ್ಪನವರ, ಎಚ್.ಬಿ. ಕುರಿ, ಶರಣಪ್ಪ ಕಂಬಳಿ, ಮೈಲಾರಪ್ಪ ಕವಲೂರ, ಹುಚ್ಚಪ್ಪ ಹಂದ್ರಾಳ, ಸಿದ್ದಪ್ಪ ಹಲವಾಗಲಿ, ಗುಡದಪ್ಪ ಶಿರಹಟ್ಟಿ, ಮಂಜಪ್ಪ ಶಿರಹಟ್ಟಿ, ಗುಡದಪ್ಪ ಕುರಿ, ಮುತ್ತಪ್ಪ ಕಲ್ವಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸಾವಿರ ಕೋಟಿ ರೂಪಾಯಿ ವೆಚ್ಚದ ಶಿಂಗಟಾಲೂರ ಏತ ನೀರಾವರಿ ಯೋಜನೆಯಿಂದ ಈ ಭಾಗದ ರೈತರಿಗೆ ನೀರು ಸಿಗದಿರುವುದು ದುರಂತ. ಕೆರೆಗಳಿಗೆ ತಕ್ಷಣ ನೀರು ಹರಿಸಿ, ಮುಂಡರಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ವಿಶೇಷ ಪರಿಹಾರ ನೀಡಬೇಕು.”
– ವೈ.ಎನ್. ಗೌಡರ, ಅಧ್ಯಕ್ಷರು, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ



