ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: “ಸಾಧನೆ ಎಂಬುದು ಸಾಧಕರ ಸ್ವತ್ತು, ಸೋಮಾರಿಗಳದ್ದಲ್ಲ. ಗುರಿ, ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದರೆ ಯಾವುದೇ ಎತ್ತರವನ್ನು ತಲುಪಬಹುದು” ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.
ಪಟ್ಟಣದ ಕೊಟ್ಟೂರೇಶ್ವರ ಚಿತ್ರಮಂದಿರದಲ್ಲಿ ತಾಲೂಕು ಕುರುಬರ ಸಂಘ, ಕನಕ ನೌಕರರ ಸಂಘ ಹಾಗೂ ಕನಕ ಸೇನೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದೂ ಮುಖ್ಯವಾಗಿದೆ. ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ಕಲಿಸಲು ಪೋಷಕರು ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಬೇಕು. “ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ, ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬ ಚಿಂತನೆ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷ ಬುಡ್ಡಿ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಉಜ್ಜಿನಿ ರುದ್ರಪ್ಪ, ಸಮಾಜದ ಮುಖಂಡರಾದ ಮುಟಗನಹಳ್ಳಿ ಕೊಟ್ರೇಶ್ ಹಾಗೂ ಕನ್ನಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಂದಿಪುರ ಡಾ. ಮಹೇಶ್ವರ ಸ್ವಾಮೀಜಿ ಹಾಗೂ ಉತ್ತಂಗಿ ಸೋಮಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷ ಮೈನಹಳ್ಳಿ ಶಿವರಾಜ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಲಗುರು ಕೊಟ್ರಯ್ಯ ಒಡೆಯರ್, ಕೆ. ಮೈಲಾರಪ್ಪ, ಜಳಕಿ ಗುರುಸಿದ್ದಪ್ಪ, ಶಿವಾನಂದಪ್ಪ, ಐಟಿ ಕೊಟ್ರೇಶ್, ಕೋಗಳಿ ಹನುಮಂತಪ್ಪ, ಬಣಕಾರ ಗೋಣೆಪ್ಪ, ಹುಲಿಮನಿ ಗೂಳಪ್ಪ, ಫೋಟೋ ರಾಮಣ್ಣ, ಭಂಡಾರಿ ಭರಮಪ್ಪ, ಹುಡೆದ ಹುಲುಗಪ್ಪ, ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಮೈನಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಂಜನೇಯ ವಕೀಲರು, ಮುರ್ನಾಳ ಹಾಗೂ ದೇವೇಂದ್ರ ಹೊಸಮನಿ ನಿರೂಪಿಸಿದರು. ವಿದ್ಯಾರ್ಥಿನಿ ಭೂಮಿಕ ಹಾಗೂ ಮಹಾಂತೇಶ್ ತಂಡದವರ ಪ್ರಾರ್ಥನೆ ಮತ್ತು ಭಾವಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.
“ಕಠಿಣ ಪರಿಶ್ರಮದಿಂದ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಉದ್ದೇಶ, ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡುವುದಾಗಿದೆ.”
– ಕುರಿ ಶಿವಮೂರ್ತಿ



