ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಉತ್ತರ ಕರ್ನಾಟಕದ ಹೆಸರಾಂತ ಹಣಕಾಸು ಸಂಸ್ಥೆಯಾದ ಶಿವಸಂಗಮ ಸಮೂಹ (ಎಸ್.ಎಸ್. ಗ್ರೂಪ್) ತನ್ನ 16ನೇ ಶಾಖೆಯನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಳಿಸಿತು.
ನಂದೀಪುರದ ಪೂಜ್ಯ ಮಹೇಶ್ವರ ಮಹಾಸ್ವಾಮಿಗಳು, ಹಾಲಸ್ವಾಮಿಮಠದ ಪರಮಪೂಜ್ಯ ಹಾಲಸ್ವಾಮಿಗಳು, ಹಿರೇಮಲ್ಲನಕೇರಿಯ ವಿರಕ್ತಮಠದ ಪೂಜ್ಯ ಅಭಿನವ ಚನ್ನಬಸವ ಮಹಾಸ್ವಾಮಿಗಳು ಹಾಗೂ ಕೊಪ್ಪಳ ಗವಿಮಠದ ಕಡಲಬಾಳು ಶಾಖಾಮಠದ ಪೂಜ್ಯ ಮರಿಶಾಂತವೀರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು. ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಂದೀಪುರದ ಪೂಜ್ಯ ಮಹೇಶ್ವರ ಮಹಾಸ್ವಾಮಿಗಳು, ಶಿವಸಂಗಮ ಸಮೂಹ ಕೇವಲ ಲಾಭ ಗಳಿಸುವ ಉದ್ದೇಶ ಹೊಂದದೇ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಹಾಗೂ ಮಧ್ಯಮ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಮಾತನಾಡಿ, ಗ್ರಾಹಕರ ವಿಶ್ವಾಸವೇ ಸಂಸ್ಥೆಯ ಬೆಳವಣಿಗೆಯ ಬುನಾದಿಯಾಗಿದೆ. ಇದೇ ವಿಶ್ವಾಸದ ಬಲದಿಂದ ಕಳೆದ ತಿಂಗಳು ಬೆಂಗಳೂರಿನಲ್ಲಿ 15ನೇ ಶಾಖೆ ಹಾಗೂ ಇದೀಗ ಹಗರಿಬೊಮ್ಮನಹಳ್ಳಿಯಲ್ಲಿ 16ನೇ ಶಾಖೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸ್ನೇಹಿ ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರಾದ ಎಂ.ಬಿ. ಲಿಂಗದಾಳ, ವ್ಹಿ.ಎಸ್. ಶಿವಕಾಳಿಮಠ, ವ್ಯವಸ್ಥಾಪಕ ನಿರ್ದೇಶಕರಾದ ಪಿ.ಎ. ದೇಸಾಯಿಮಠ ಹಾಗೂ ಎಂ.ಬಿ. ಗಾಣಿಗೇರ, ವ್ಯವಸ್ಥಾಪಕ ಗುರುರಾಜ ಬೆಳಮಕರ, ಪುರಸಭೆ ಸದಸ್ಯ ಹನುಮಂತಪ್ಪ ಜೋಗಿ, ಪ್ರಥಮ ದರ್ಜೆ ಗುತ್ತಿಗೆದಾರ ಕೇಶವರೆಡ್ಡಿ, ರಮೇಶ ಗುಡ್ಲಾನೂರ, ಶರಣಪ್ಪ ಹೊಸಪೇಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮೂಹ ಸಂಸ್ಥೆಯ ಎಲ್ಲ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ, ಗ್ರಾಹಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“ಶಿವಸಂಗಮ ಸಮೂಹವು ಕೇವಲ ಹಣಕಾಸು ಸಂಸ್ಥೆಯಲ್ಲ; ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರನ್ನು ಸಬಲರನ್ನಾಗಿಸುವ ಸಮಾಜಮುಖಿ ಸಂಸ್ಥೆಯಾಗಿದೆ.”
– ಪೂಜ್ಯ ಮಹೇಶ್ವರ ಮಹಾಸ್ವಾಮಿಗಳು, ನಂದೀಪುರ



