ಕೊಯಮತ್ತೂರು: ‘ಪೆದ್ದಿ’ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ರಾಮ್ ಚರಣ್ ಆರೋಗ್ಯ ಸಮಸ್ಯೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಿನಗಳಿಂದ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ ಅವರು, ವೈದ್ಯರ ಸಲಹೆಯಂತೆ ಶೀಘ್ರದಲ್ಲೇ ಮೈನರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಚಿಕಿತ್ಸೆಗಾಗಿ ಕೊಯಮತ್ತೂರಿನ ಪ್ರತಿಷ್ಠಿತ ಗಂಗಾ ಆಸ್ಪತ್ರೆಗೆ ದಾಖಲಾಗಲಿದ್ದಾರೆ.
‘ಪೆದ್ದಿ’ ಚಿತ್ರದ ಪ್ರಚಾರದ ವೇಳೆಯೇ ರಾಮ್ ಚರಣ್ ಕೈಗೆ ಪ್ಲಾಸ್ಟರ್ ಧರಿಸಿಕೊಂಡು ಕಾಣಿಸಿಕೊಂಡಿದ್ದರು. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದರೂ, ಚಿತ್ರದ ಪ್ರಚಾರಕ್ಕೆ ಅಡ್ಡಿಯಾಗಬಾರದೆಂದು ವೈದ್ಯರ ಸಲಹೆಯಂತೆ ಪ್ಲಾಸ್ಟರ್ ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಆದರೆ ಇತ್ತೀಚೆಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಸಂಪೂರ್ಣ ಗುಣಮುಖವಾಗಿಲ್ಲ ಎಂಬುದು ತಿಳಿದುಬಂದಿದೆ. ನಿರಂತರ ನೋವು ಮತ್ತು ಮಣಿಕಟ್ಟಿನ ಮೇಲಿನ ಒತ್ತಡದಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ ಮೆಗಾಸ್ಟಾರ್ ಚಿರಂಜೀವಿ, ಸುರೇಖಾ, ಉಪಾಸನಾ ಸೇರಿದಂತೆ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲೇ ಜೊತೆಯಾಗಲಿದ್ದಾರೆ. ಖ್ಯಾತ ಅಸ್ಥಿ ತಜ್ಞ ಡಾ. ರಾಜಶೇಖರ್ ನೇತೃತ್ವದಲ್ಲಿ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ.
ಗಮನಾರ್ಹ ಸಂಗತಿಯೆಂದರೆ, ಕೆಲವೇ ದಿನಗಳ ಹಿಂದೆ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಕೂಡ ಭುಜದ ಗಾಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮೆಗಾ ಕುಟುಂಬದ ಮತ್ತೊಬ್ಬ ಸ್ಟಾರ್ ನಟನಿಗೂ ಶಸ್ತ್ರಚಿಕಿತ್ಸೆ ಅಗತ್ಯವಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ‘ಪೆದ್ದಿ’ ಯಶಸ್ಸಿನ ಬಳಿಕ ರಾಮ್ ಚರಣ್ ಮುಂದಿನ ಚಿತ್ರವನ್ನು ನಿರ್ದೇಶಕ ಸುಕುಮಾರ್ ಜೊತೆ ಆರಂಭಿಸಲಿದ್ದಾರೆ.



