ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಲಕ್ಷ್ಮೇಶ್ವರದ ಕರೆಗೋರಿ ಆಶ್ರಯ ಬಡಾವಣೆಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ನಿವಾಸಿಗಳು ಶನಿವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಂಜುನಾಥ ಅಂಗಡಿ ಹಾಗೂ ಆನಂದ ಅಮರಶೆಟ್ಟಿ, ಹಲವು ಬಾರಿ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯಲ್ಲೇ ನಿಂತು ದುರ್ವಾಸನೆ ಹರಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದೆ. ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಪ್ರತಿಕ್ರಿಯಿಸಿ, ಕರೆಗೋರಿ ಆಶ್ರಯ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ₹48 ಲಕ್ಷ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿವಾಸಿಗಳ ಮನವಿ ಮೇರೆಗೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಹಾಗೂ ಲಿಂಬಯ್ಯ ಸ್ವಾಮಿಮಠ ಸ್ಥಳಕ್ಕೆ ಭೇಟಿ ನೀಡಿ ಬಡಾವಣೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ರಸ್ತೆಯಲ್ಲಿ ನಿಂತಿದ್ದ ಮಳೆ ಹಾಗೂ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಜೆಸಿಬಿ ಯಂತ್ರದ ಮೂಲಕ ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಆನಂದ ಅಮರಶೆಟ್ಟಿ, ಮಂಜುನಾಥ ಅಂಗಡಿ, ಶಶಿಕಲಾ ಶೇಖಣ್ಣವರ, ಲಕ್ಷ್ಮಣ ನಾವಿ, ಮಲ್ಲಿಕಾರ್ಜುನ ಕರೆಯುತ್ತಿನ, ಮಂಜು ಸೋಗಿ, ಮಹೇಶ ಶಿರಹಟ್ಟಿ, ಗಂಗಾಧರ ಕರೆಯುತ್ತಿನ, ಬಸವರಾಜ ಅಕ್ಕಿ, ಬಸವರಾಜ ಹುಬ್ಬಳ್ಳಿ, ಗಣೇಶ ಉಮಚಗಿ, ಮಂಜುನಾಥ ಹುದ್ದಾರ, ಅಶೋಕ ಗೊರವರ, ಯಲ್ಲಪ್ಪ ಹಿಮ್ಮಡಿ, ಮಂಜುನಾಥ ದೊಡ್ಡಮನಿ, ಗುರುನಾಥ ಬೇಂದ್ರೆ, ಬಸವರಾಜ ಕನವಳ್ಳಿ, ರವಿ ಹುಬ್ಬಳ್ಳಿ, ವರುಣ ಸೊರಟೂರ, ಆನಂದ ಬೂದಿಹಾಳ ಸೇರಿದಂತೆ ಆಶ್ರಯ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.
“ಮೂಲಸೌಲಭ್ಯಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರಸ್ತೆ, ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.”
– ಪ್ರತಿಭಟನಾನಿರತ ಆಶ್ರಯ ಬಡಾವಣೆಯ ನಿವಾಸಿಗಳು



