ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬಾಗಲಗುಂಟೆಯ ಭೈರವೇಶ್ವರ ಬಡಾವಣೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಸುರಿದ ಮಳೆಯಿಂದ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ನೀರು ಬಡಾವಣೆಯ ಮನೆಗಳಿಗೆ ನುಗ್ಗಿದೆ. ರಾಜಕಾಲುವೆ ಕಾಮಗಾರಿ ವೇಳೆ ನಡೆದಿರುವ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೂಳೆತ್ತುವ ಕಾಮಗಾರಿ ಹಾಗೂ ರಿಟೈನಿಂಗ್ ವಾಲ್ ನಿರ್ಮಾಣದ ವೇಳೆ ಮಣ್ಣನ್ನು ಅಡ್ಡಲಾಗಿ ಹಾಕಲಾಗಿತ್ತು. ಇದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗದೆ, ಏಕಾಏಕಿ ಬಡಾವಣೆಯತ್ತ ನುಗ್ಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಮನೆಗಳ ಒಳಭಾಗ ಹಾಗೂ ನೆಲಮಾಳಿಗೆಯಲ್ಲಿ ನೀರು ತುಂಬಿಕೊಂಡಿದ್ದು, ಐದರಿಂದ ಆರು ಬೈಕ್‌ಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಕೆಲ ಮನೆಗಳ ನೆಲಮಾಳಿಗೆಯಲ್ಲಿ ಸುಮಾರು ಎಂಟು ಅಡಿಗಳಷ್ಟು ನೀರು ನಿಂತಿದೆ.
ನೀರಿನಿಂದಾಗಿ ಹಲವು ವಸ್ತುಗಳು ಹಾನಿಯಾಗಿದ್ದು, ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಸ್ಥಳೀಯರೇ ಸ್ವತಃ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದು, ಮಳೆ ಅವಾಂತರದಿಂದ ಬಡಾವಣೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.



