ತುಮಕೂರು: ಕಳೆದ ಹಲವು ತಿಂಗಳಿಂದ ಪಾವಗಡ ತಾಲೂಕಿನ ಕನಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ವೆಂಕಟೇಶ್ ಅರೆಬೆತ್ತಲೆಯಾಗಿ ಮದ್ಯ ಸೇವಿಸುತ್ತಾ ಚಿಕನ್ ತಿನ್ನುತ್ತಿದ್ದ ಎನ್ನಲಾಗಿದೆ.
ಕಳೆದ ಕೆಲ ತಿಂಗಳಿಂದ ಕನಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ಹಾಗೂ ಬೆದರಿಕೆ ಹಾಕುತ್ತಿದ್ದ ಆರೋಪ ವೆಂಕಟೇಶ್ ವಿರುದ್ಧ ಕೇಳಿಬಂದಿತ್ತು. ಆ.29ರಂದು ರೈತ ಕರಿಯಣ್ಣ ಅವರ ಪಂಪ್‌ಸೆಟ್‌ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು.
ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತರೊಬ್ಬರಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ವೆಂಕಟೇಶ್ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಅಡಿಷನಲ್ ಎಸ್‌ಪಿ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್ಸ್‌ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್‌ಪೆಕ್ಟರ್ ಕೊಟ್ರೇಶ್, ಎಸ್‌ಐ ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ವೆಂಕಟೇಶ್ ಬಂಧನದಿಂದ ಕನಕಲಬಂಡೆ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



