ದಾವಣಗೆರೆ: ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ರೈತ ಒಕ್ಕೂಟದ ವತಿಯಿಂದ ದಾವಣಗೆರೆ ಹೊರವಲಯದ ಬಾಡ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಯೋಜನೆಗೆ ಮೂರು ಟಿಎಂಸಿ ನೀರು ಹರಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮಳೆ ಕೊರತೆಯಿಂದ ತೋಟಗಾರಿಕಾ ಬೆಳೆಗಳು, ಇತರೆ ಬೆಳೆಗಳು ಹಾಗೂ ಭತ್ತ ಒಣಗುತ್ತಿವೆ. ಕೆರೆಗಳು ಬತ್ತಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಹೀಗಾಗಿ ಕೂಡಲೇ ಭದ್ರಾ ಬಲದಂಡೆ ನಾಲೆಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಂ.ಪಿ. ರೇಣುಕಾಚಾರ್ಯ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಈ ಬಗ್ಗೆ ಮನವಿ ಮಾಡಲಾಗಿತ್ತು. ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿಯೂ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.
ಈಗಲೇ ಸರ್ಕಾರ ಕ್ರಮ ಕೈಗೊಂಡು ಭದ್ರಾ ಬಲದಂಡೆ ನಾಲೆಗೆ ನೀರು ಹರಿಸದಿದ್ದರೆ, ಭದ್ರಾ ನೀರು ನಮ್ಮ ಕೈತಪ್ಪುವ ಆತಂಕವಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ರೈತರ ಹಿತದೃಷ್ಟಿಯಿಂದ ಕೂಡಲೇ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.



