ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 67ರ ಪಕ್ಕದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪೊಲೀಸರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಿಂದ ಅಂಗಡಿಗಳ ಮಾಲೀಕರು ಕಂಗಾಲಾಗಿದ್ದಾರೆ. ಇತ್ತ, ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಅಂಗಡಿಗಳ ತೆರವಿನಿಂದ ಅಸುಂಡಿ ಹಾಗೂ ಬಿಂಕದಕಟ್ಟಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಿಂದ ತೆರವಿಗೆ ನೋಟಿಸ್ ನೀಡಲಾಗಿತ್ತು. ಹಬ್ಬದ ಸಮಯದಲ್ಲಿ ಕೆಲಸಗಾರರು ಸಿಗದ ಕಾರಣ ಅಂಗಡಿಗಳನ್ನು ತಾವೇ ತೆರವುಗೊಳಿಸಲು ಮಾಲೀಕರು ಕಾಲಾವಕಾಶ ಕೇಳಿದ್ದರು ಎನ್ನಲಾಗಿದೆ. ಆದರೆ, ಸ್ವಯಂ ತೆರವಿಗೆ ಅವಕಾಶ ನೀಡದೆ ಜೆಸಿಬಿ ಮೂಲಕ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
10 ಲಕ್ಷ ರೂ. ಸಾಲ ಮಾಡಿ ಶೆಡ್ ನಿರ್ಮಿಸಿದ್ದ ಮಾಲೀಕರೊಬ್ಬರು, ತಮ್ಮ ಕಣ್ಣೆದುರೇ ನಿರ್ಮಾಣ ಹಾನಿಗೊಳಗಾಗಿದ್ದನ್ನು ಕಂಡು ಕಣ್ಣೀರಿಟ್ಟರು. ತಮ್ಮ ಶೆಡ್‌ನ ಐದು ಅಡಿ ಜಾಗವಷ್ಟೇ ಅತಿಕ್ರಮಣವಾಗಿತ್ತು. ಇಡೀ ಶೆಡ್‌ಗೆ ಹಾನಿ ಮಾಡಲಾಗಿದೆ ಎಂದು ಅವರು ಅಳಲು ತೋಡಿಕೊಂಡರು. ಇನ್ನೊಂದು ದಿನ ಅವಕಾಶ ನೀಡಿದ್ದರೆ ನಾವೇ ತೆರವು ಮಾಡುತ್ತಿದ್ದೆವು. ಆದರೆ, ಅಧಿಕಾರಿಗಳು ಬಡವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
14 ಮಂದಿ ಅಪಘಾತದಲ್ಲಿ ಸಾವು: ಅಧಿಕಾರಿಗಳ ವಾದ:
ಹೆದ್ದಾರಿ ಪಕ್ಕದ ಅಂಗಡಿಗಳಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಅಪಘಾತಗಳಿಗೆ ಕಾರಣವಾಗಿವೆ. ಈವರೆಗೆ 14 ಮಂದಿ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ ಎಂಬುದು ಅಧಿಕಾರಿಗಳ ವಾದ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಭಾವಿಗಳ ಡಾಬಾಗಳನ್ನೂ ತೆರವುಗೊಳಿಸಿ:
ಬಡವರ ಅಂಗಡಿಗಳನ್ನಷ್ಟೇ ಗುರಿಯಾಗಿಸಬಾರದು. ಹುಲಕೋಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಪ್ರಭಾವಿಗಳ ಡಾಬಾಗಳ ಮೇಲೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡದೆ, ನಿಯಮ ಉಲ್ಲಂಘಿಸಿದ ಎಲ್ಲ ಕಟ್ಟಡಗಳ ವಿರುದ್ಧ ಸಮಾನ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








