ಬೆಂಗಳೂರು: ಕಳ್ಳರೆಂದು ಆರೋಪಿಸಿ ಇಬ್ಬರು ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾದ ಶಾಹಿದ್ (19) ನೀಡಿದ ದೂರಿನ ಮೇರೆಗೆ 10 ಜನರ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾಹಿತಿಯ ಪ್ರಕಾರ, ವಾಹನಕ್ಕೆ ಅಡ್ಡ ಬಂದ ವಿಚಾರವಾಗಿ ಶಾಹಿದ್ ಮತ್ತು ಫರ್ದೀನ್ ಪಾಷಾ ಎಂಬುವವರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಇಬ್ಬರನ್ನೂ ಕಳ್ಳರೆಂದು ಬಿಂಬಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಇಬ್ಬರನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಾಹಿದ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದ್ದು, ಆತನ ಮೊಬೈಲ್ ಫೋನ್ನ್ನೂ ಒಡೆದು ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆ
ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ಶಾಹಿದ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಿಟಿ ಮಾರ್ಕೆಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










