ವಿಜಯಸಾಕ್ಷಿ ಸುದ್ದಿ, ಗದಗ: ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯವು ಮನುಷ್ಯನಿಗೆ ಅರಿವು, ವಿದ್ಯೆ ಹಾಗೂ ಸಂಸ್ಕಾರ ನೀಡಿ ಸನ್ಮಾರ್ಗದಲ್ಲಿ ಬದುಕುವ ಶಕ್ತಿಯನ್ನು ನೀಡುತ್ತದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.
ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಬೂದೀಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ನಡೆದ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ಕೋಶ ಓದಬೇಕು, ದೇಶ ಸುತ್ತಬೇಕು” ಎಂಬ ಗಾದೆಯಂತೆ ಜಗತ್ತು ಮತ್ತು ಬದುಕಿನ ಅರಿವಿಗೆ ಸಾಹಿತ್ಯದ ಅಧ್ಯಯನ ಅಗತ್ಯ. ಶರಣ ಸಾಹಿತ್ಯವು ಕಣ್ಣಿಲ್ಲದವರಿಗೆ ಕಣ್ಣು, ವಿದ್ಯೆಯಿಲ್ಲದವರಿಗೆ ಅರಿವು ಹಾಗೂ ಬದುಕಿಗೆ ಸ್ಪಷ್ಟ ದಾರಿ ತೋರಿಸುವ ದಿವ್ಯಶಕ್ತಿಯಾಗಿದೆ. ಜಾತಿ-ಮತಗಳ ಭೇದ ಮರೆತು “ಮನುಷ್ಯ ಜಾತಿ ಒಂದೇ” ಎಂಬ ಮೌಲ್ಯವನ್ನು ಮಕ್ಕಳಲ್ಲಿ ಬಿತ್ತಲು ಶರಣ ಸಾಹಿತ್ಯದ ಬೋಧನೆ ಅತ್ಯಗತ್ಯ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ನಿಂಗು ಸೊಲಗಿ ಮಾತನಾಡಿ, ಬಸವಣ್ಣನವರ ವಚನಗಳು ಹಾಗೂ ಶರಣರ ತತ್ವಗಳು ಸಮಾಜಕ್ಕೆ ಸದಾ ದಾರಿದೀಪವಾಗಿವೆ. ವಚನಗಳ ಆದರ್ಶ ಹಾಗೂ ಶರಣ ಸಂಸ್ಕೃತಿಯನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಚಯಿಸಬೇಕು. ಶರಣ ಸಂಸ್ಕೃತಿ ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ; ಅದು ಸಮಸ್ತ ಮಾನವಕುಲದ ಸಾರ್ವಭೌಮ ಸಂಸ್ಕೃತಿಯಾಗಿದೆ ಎಂದು ಹೇಳಿದರು.
“ಇವ ನಮ್ಮವ” ಎಂಬ ಸಮಾನತೆಯ ಭಾವನೆಯನ್ನು ಮಕ್ಕಳಲ್ಲಿ ಬಿತ್ತಿದಾಗ ಮಾತ್ರ ಆದರ್ಶ ಸಮಾಜ ನಿರ್ಮಾಣ ಸಾಧ್ಯ. ಮೇವುಂಡಿ ಮಲ್ಲಾರಿ ಅವರ ಕಥೆಗಳನ್ನು ಉದಾಹರಿಸಿ, ಮಕ್ಕಳಲ್ಲಿ ನೈಸರ್ಗಿಕ ಕುತೂಹಲ, ಸೃಜನಶೀಲತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ ಎಂದರು.
ಇಂದಿನ ಮಕ್ಕಳು ಪ್ರಕೃತಿಯಿಂದ ದೂರವಾಗುತ್ತಿದ್ದಾರೆ. ಅವರಿಗೆ ಜಾನಪದ ಆಟಗಳು, ಕಥೆಗಳು, ಕಾಯಕ ಹಾಗೂ ದಾಸೋಹ ಸಂಸ್ಕೃತಿಯನ್ನು ಶಿಕ್ಷಣದ ಭಾಗವಾಗಿ ಪರಿಚಯಿಸಬೇಕು. ಕೇವಲ ಪರೀಕ್ಷೆಗಾಗಿ ಓದುವ ಶಿಕ್ಷಣವಲ್ಲ, ಜೀವನದ ಸವಾಲುಗಳನ್ನು ಎದುರಿಸುವ ಜೀವನ ಕೌಶಲಗಳನ್ನು ಕಲಿಸುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ. ಅವರಲ್ಲಿ ನಾವು ಬಿತ್ತುವ ಮೌಲ್ಯಗಳೇ ಅವರ ಭವಿಷ್ಯ ರೂಪಿಸುತ್ತವೆ. ಪೋಷಕರು ತಮ್ಮ ನಿರೀಕ್ಷೆಗಳ ಒತ್ತಡ ಹೇರದೆ, ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಹಾಗೂ ಸಮಯದ ಮೌಲ್ಯವನ್ನು ತಿಳಿಸುವ ಅಗತ್ಯವಿದೆ. ಬಾಲ್ಯ ಮತ್ತು ವಿದ್ಯಾಭ್ಯಾಸದ ಅವಧಿಯನ್ನು ಸದುಪಯೋಗಪಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ, ಸುಧಾ ಹುಚ್ಚಣ್ಣವರ, ಶಿವಪ್ರಕಾಶ ಮಹಾಜನಶೆಟ್ಟರ, ಸುಲೋಚನಾ ಐಹೊಳೆ, ಡಿ.ಎಸ್. ತಳವಾರ, ಎಂ.ಕೆ. ಲಮಾಣಿ, ನಂದಾ ಕಪ್ಪತ್ತನವರ, ಬೂದಪ್ಪ ಅಂಗಡಿ, ಬಸವರಾಜ ಕೊಟಗಿ, ಪ್ರಕಾಶ ಅಸುಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೆ.ಎ. ಬಳಿಗೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಧೂಳಪ್ಪನವರ ಹಾಗೂ ಎಸ್.ಎಂ. ಮರಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಝೀ ವಾಹಿನಿಯ ಸ್ಪರ್ಧಿ, ಗದಗ ಜಿಲ್ಲೆಯ ಪ್ರೀತಮ್ ಕಬ್ಬೇರಹಳ್ಳಿ ಅವರಿಗೆ ‘ಬಾಲ ಶರಣಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚೇತನ ಸೊಲಗಿ ತಮ್ಮ ಗಾಯನದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು.



