ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ವಹೀದಾ ಸುಲ್ತಾನಾ (70) ನಿಧನರಾಗಿದ್ದಾರೆ.
ಮೈಸೂರು ಕಲ್ಯಾಣಗಿರಿ ನಿವಾಸಿಯಾಗಿದ್ದ ಡಾ. ವಹೀದಾ ಸುಲ್ತಾನಾ ಅವರಿಗೆ ಇಂದು ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಡಾ. ವಹೀದಾ ಸುಲ್ತಾನಾ ಅವರು ಸುಮಾರು ಮೂರು ದಶಕಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.
ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದ ಅವರು, ಮಂಗಳೂರು ವಿವಿ ಮಹಿಳಾ ಹಾಸ್ಟೆಲ್ ವಾರ್ಡನ್ ಆಗಿ ಹಾಗೂ ಅಲ್ಪಸಂಖ್ಯಾತರು ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಐಎಎಸ್, ಕೆಎಎಸ್ ತರಬೇತಿ ಕಾರ್ಯಕ್ರಮಗಳ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಮಾಧ್ಯಮ, ಆರೋಗ್ಯ, ತಂತ್ರಜ್ಞಾನ, ಮಹಿಳಾ ವಿಚಾರಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲೇಖನಗಳನ್ನು ಬರೆದಿದ್ದ ಅವರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದರು.
ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ, ಹಾಂಗ್ಕಾಂಗ್ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದರು.
ಕಾರ್ಪೊರೇಟ್ ಕಮ್ಯುನಿಕೇಶನ್ಸ್, ಮಹಿಳೆ ಮತ್ತು ಮಾಧ್ಯಮ, ಆರೋಗ್ಯ ಸಂವಹನ ಸೇರಿದಂತೆ ಹಲವು ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು, ಏಷ್ಯನ್ ಕಾಂಗ್ರೆಸ್ ಫಾರ್ ಮೀಡಿಯಾ ಆ್ಯಂಡ್ ಕಮ್ಯುನಿಕೇಶನ್ನ ರಾಷ್ಟ್ರೀಯ ಸಮಿತಿಯ ಉಪ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಡಾ. ವಹೀದಾ ಸುಲ್ತಾನಾ ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ (MAM) ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಅವರ ಅಂತ್ಯಕ್ರಿಯೆ ಆಗಸ್ಟ್ 7ರಂದು ಅಪರಾಹ್ನ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.



