ಉಡುಪಿ: ಕರಾವಳಿ ಭಾಗದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಈ ಘಟನೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಡೇವಿಡ್ ಡಿಸೋಜಾ ಅವರು ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದರು.
ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಹಂತಕರಿಗಾಗಿ ಪೊಲೀಸರ ಹುಡುಕಾಟ:
ಡೇವಿಡ್ ಡಿಸೋಜಾ ಅವರ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಸೇರಿದಂತೆ ಹಲವು ಕಾರಣಗಳಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಉಡುಪಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು ಮತ್ತೊಂದು ಶೂಟೌಟ್:
ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಮತ್ತೊಂದು ಗುಂಡಿನ ದಾಳಿ ಪ್ರಕರಣ ನಡೆದಿತ್ತು.
ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ (45) ಅವರನ್ನು ಡೆರಿಕ್ ಎಂಬಾತ ನಾಡಪಿಸ್ತೂಲಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದ.
ಐವನ್ ಅವರು 27 ಲಕ್ಷ ರೂಪಾಯಿ ಹಣ ವಸೂಲಿ ಮಾಡಿಕೊಟ್ಟಿದ್ದರು. ಆದರೆ ಅವರಿಗೆ ನೀಡಬೇಕಿದ್ದ 1.5 ಲಕ್ಷ ರೂಪಾಯಿ ಬಾಕಿ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಇದೇ ವಿಚಾರ ಕೊಲೆಯಲ್ಲಿ ಅಂತ್ಯವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಈ ಪ್ರಕರಣದ ಆರೋಪಿ ಡೆರಿಕ್ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.
ಕರಾವಳಿಯಲ್ಲಿ ಆತಂಕ:
ಉಡುಪಿ ಜಿಲ್ಲೆಯಲ್ಲಿ ಪದೇಪದೇ ನಡೆಯುತ್ತಿರುವ ಗುಂಡಿನ ದಾಳಿ ಘಟನೆಗಳು ಜನರಲ್ಲಿ ಆತಂಕ ಮೂಡಿಸಿವೆ. ಇದೀಗ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.



