ಬೆಂಗಳೂರು: ಉದ್ಯಮಿ ಆದಿಕೇಶವುಲು ಕುಟುಂಬದ ವಿರುದ್ಧ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದೆ. ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ನೀಡಲಿಲ್ಲ ಎಂಬ ಕಾರಣಕ್ಕೆ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ಆರೋಪ ಆದಿಕೇಶವುಲು ಅವರ ಮೊಮ್ಮಗನ ವಿರುದ್ಧ ಕೇಳಿಬಂದಿದೆ. ಘಟನೆ ಸಂಬಂಧ ದೂರು ದಾಖಲಾಗಿದ್ದರೂ, ಪೊಲೀಸರು ಎನ್‌ಸಿಆರ್ ಮಾತ್ರ ದಾಖಲಿಸಿರುವುದು ಪ್ರಶ್ನೆಗೆ ಕಾರಣವಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ ಪ್ರಕೃತಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಅವರ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪಿಸಲಾಗಿದೆ.
ಮಾಹಿತಿಯ ಪ್ರಕಾರ, ಆದಿಕೇಶವುಲು ಅವರ ಮೊಮ್ಮಗ ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೇಳಿದ್ದು, ಸೆಕ್ಯುರಿಟಿ ಗಾರ್ಡ್ “ಇಲ್ಲ” ಎಂದು ಉತ್ತರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅಪಾರ್ಟ್‌ಮೆಂಟ್ ಪಾರ್ಕಿಂಗ್ ಪ್ರದೇಶದಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ನಿವಾಸಿಗಳ ಆತಂಕಕ್ಕೂ ಕಾರಣರಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆ ಬಳಿಕ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸದೆ ಎನ್‌ಸಿಆರ್ ಮಾತ್ರ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಡಿಸಿಪಿಗೆ ಪ್ರತ್ಯೇಕ ದೂರು ಸಲ್ಲಿಸಲಾಗಿದೆ.
ಆದಿಕೇಶವುಲು ಕುಟುಂಬದ ಹೆಸರು ಈ ಹಿಂದೆ ಕೂಡ ಹಲವು ವಿವಾದಗಳಲ್ಲಿ ಕೇಳಿಬಂದಿತ್ತು. 2019ರಲ್ಲಿ ಅವರ ಆಪ್ತ ರಘುನಾಥ್ ಅನುಮಾನಾಸ್ಪದ ಸಾವಿನ ಪ್ರಕರಣ, ಗೀತಾ ವಿಷ್ಣು ಮೇಲಿನ ಹಲ್ಲೆ ಪ್ರಕರಣ, 2017ರ ಎಸ್‌ಯುವಿ ಅಪಘಾತ ಹಾಗೂ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪ್ರಕರಣ, ನಾಯಿ ಮೇಲೆ ಕಾರು ಹತ್ತಿಸಿದ ಆರೋಪ ಸೇರಿದಂತೆ ಹಲವು ಪ್ರಕರಣಗಳು ಈ ಕುಟುಂಬದ ಸುತ್ತ ಸದ್ದು ಮಾಡಿದ್ದವು.



