ಕಲಬುರಗಿ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಆಳಂದ ಶಾಸಕ ಬಿ.ಆರ್. ಪಾಟೀಲ್, ತಮ್ಮ ಸಚಿವ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ಕೆಲ ನಾಯಕರು ಅಡ್ಡಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾಗಿ ತಿಳಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅದು ಯಾವ ನಾಯಕ ಎನ್ನುವುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಜಾರಿಕೊಳ್ಳಲು ಈ ರೀತಿಯ ಕಾರಣ ಹೇಳಿದ್ದಾರೆ ಅಥವಾ ನಿಜವಾಗಿಯೇ ಹೇಳಿದ್ದಾರೆ ಎಂಬುದೂ ತಿಳಿದಿಲ್ಲ” ಎಂದು ಪ್ರತಿಕ್ರಿಯಿಸಿದರು.
“ನಾನು ಎಲ್ಲಿಯೂ ಹೋಗಿ ನನ್ನನ್ನು ಸಚಿವನನ್ನಾಗಿ ಮಾಡಿ ಎಂದು ಕೇಳಿಕೊಂಡಿಲ್ಲ. ವಿಧಾನಸಭೆ ಚುನಾವಣೆಯ ವೇಳೆ ಸಿದ್ದರಾಮಯ್ಯ ಅವರು, ‘ನನ್ನ ಗೆಳೆಯನನ್ನು ಗೆಲ್ಲಿಸಿ ಕಳುಹಿಸಿ, ನಾನು ಸಚಿವನನ್ನಾಗಿ ಮಾಡುತ್ತೇನೆ’ ಎಂದು ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಆದರೆ ಈಗ ಮಾತು ಕೊಟ್ಟು ಮಾತು ತಪ್ಪಿದ್ದಾರೆ. ಇದೇ ನನಗೆ ಅತ್ಯಂತ ಬೇಸರ ತಂದಿರುವ ಸಂಗತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂರು ಬಾರಿ ಕರೆದು ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊನೆಗೆ ಆ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಪಾಟೀಲ್ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ಗೆ 140ಕ್ಕೂ ಹೆಚ್ಚು ಶಾಸಕರು ಇದ್ದು, ಎಲ್ಲರನ್ನೂ ಕರೆದು ಮಾತನಾಡುವ ಪರಿಸ್ಥಿತಿ ಮುಖ್ಯಮಂತ್ರಿ ಅವರಿಗೆ ಇಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದರು.



