ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಮತ್ತೊಂದು ದೊಡ್ಡ ಸುಳಿವು ಸಿಕ್ಕಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ವಾಟ್ಸ್‌ಆ್ಯಪ್ ಕಾನ್ಫರೆನ್ಸ್ ಕಾಲ್‌ನ ವಿವರಗಳು ಪತ್ತೆಯಾಗಿದ್ದು, ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿದ ವೇಳೆ ಗೌರವ್ ಶೆಟ್ಟಿ ಹಾಗೂ ಕಿರಣ್ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಪುನೀತ್ ಹಾಗೂ ಆತನ ತಂಡಕ್ಕೆ ಇವರಿಬ್ಬರು ಮಾರ್ಗದರ್ಶನ ನೀಡಿದ್ದರೆಂಬ ಮಾಹಿತಿ ಇದೀಗ ತನಿಖೆಗೆ ಹೊಸ ತಿರುವು ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿ ಸಂದೀಪ್, ಕೋರ್ಟ್‌ನಲ್ಲಿ ತಮ್ಮನ್ನು ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುನೀತ್, ಸುಹಾಸ್ ಹಾಗೂ ವೇಣು ಅವರನ್ನು ಬಂಧಿಸಿದ್ದರು.
ಪೊಲೀಸರ ತನಿಖೆಯಲ್ಲಿ ಸಾಕ್ಷಿಗೆ ಬೆದರಿಕೆ ಹಾಕುವ ಕಾರ್ಯಾಚರಣೆಯ ವೇಳೆ ವಾಟ್ಸ್‌ಆ್ಯಪ್ ಕಾನ್ಫರೆನ್ಸ್ ಕಾಲ್ ನಡೆದಿರುವುದು ಪತ್ತೆಯಾಗಿದೆ. ಕಿರಣ್ ಹಾಗೂ ಗೌರವ್ ಶೆಟ್ಟಿ ಈ ಕಾಲ್‌ನಲ್ಲಿದ್ದು, ಪುನೀತ್ ಮತ್ತು ಆತನ ತಂಡಕ್ಕೆ ಸೂಚನೆಗಳನ್ನು ನೀಡಿದ್ದರು ಎನ್ನಲಾಗಿದೆ.
ಪುನೀತ್ ಮೂಲಕ ಸಾಕ್ಷಿಯನ್ನು ಕಿಡ್ನಾಪ್ ಮಾಡಿಸಿ ಬೆದರಿಕೆ ಹಾಕಿಸಿದ ಪ್ರಕರಣದಲ್ಲಿ ಇದೀಗ ಗೌರವ್ ಶೆಟ್ಟಿ ಹಾಗೂ ಕಿರಣ್ ಅವರ ಪಾತ್ರದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯದ ಸಮಯದಲ್ಲಿ ಇಬ್ಬರೂ ಸಂಪರ್ಕದಲ್ಲಿದ್ದದ್ದು ಎಫ್‌ಎಸ್‌ಎಲ್ ವರದಿಯಿಂದ ದೃಢಪಟ್ಟಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಪುನೀತ್‌ಗೆ ಪ್ರಭಾವಿ ಮಹಿಳೆಯೊಬ್ಬರು ಕರೆ ಮಾಡಿರುವುದು ಪತ್ತೆಯಾಗಿದೆ. ಗೌರವ್ ಶೆಟ್ಟಿ ಹೇಳಿದಂತೆ ನಡೆದುಕೊಳ್ಳುವಂತೆ ಆಕೆ ಪುನೀತ್‌ಗೆ ಸೂಚಿಸಿದ್ದಳು ಎನ್ನಲಾಗಿದ್ದು, ಇದರೊಂದಿಗೆ ಪ್ರಕರಣದ ಹಿಂದೆ ಪ್ರಭಾವಿ ಮಹಿಳೆ, ಗೌರವ್ ಶೆಟ್ಟಿ, ಕಿರಣ್ ಹಾಗೂ ಇತರರ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.
ದರ್ಶನ್ ಕುಟುಂಬಕ್ಕೆ ಅತ್ಯಾಪ್ತನಾಗಿದ್ದ ಪುನೀತ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ. ಇದೀಗ ಅದೇ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್ ಬಂಧನಕ್ಕೊಳಗಾಗಿದ್ದಾನೆ. ಪುನೀತ್ ಹಾಗೂ ಆತನ ತಂಡ ಸಾಕ್ಷಿಯನ್ನು ಕಿಡ್ನಾಪ್ ಮಾಡಿ ಬೆದರಿಕೆ ಹಾಕಿದ್ದರೆಂಬ ಆರೋಪದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಮುಂದಿನ ಹಂತದಲ್ಲಿ ಗೌರವ್ ಶೆಟ್ಟಿ ಹಾಗೂ ಕಿರಣ್ ಅವರನ್ನು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.
ಸದ್ಯ ಪೊಲೀಸರ ಕೈಗೆ ಮತ್ತೊಂದು ಟೆಕ್ನಿಕಲ್ ವರದಿ ಬರಬೇಕಿದೆ. ಆ ವರದಿ ಸಿಕ್ಕ ಬಳಿಕ ಕಾನ್ಫರೆನ್ಸ್ ಕಾಲ್‌ನಲ್ಲಿ ಯಾರೆಲ್ಲ ಇದ್ದರು, ಯಾರು ಯಾರಿಗೆ ಸೂಚನೆ ನೀಡಿದ್ದರು ಹಾಗೂ ಸಾಕ್ಷಿಗೆ ಬೆದರಿಕೆ ಹಾಕಿದ ಸಂಪೂರ್ಣ ಜಾಲದಲ್ಲಿ ಯಾರ ಪಾತ್ರ ಏನು ಎಂಬುದರ ಕುರಿತು ಮತ್ತಷ್ಟು ಸತ್ಯಗಳು ಹೊರಬೀಳುವ ಸಾಧ್ಯತೆ ಇದೆ.



