ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನವನ್ನು ತುರ್ತಾಗಿ ಸಾರ್ವಜನಿಕರ ಬಳಕೆಗೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಭರವಸೆ ನೀಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಲಾಭವನ ಹಾಗೂ ಕಡಪಾ ಮೈದಾನ ಉಳಿಸಿ ಹೋರಾಟ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಲಾಭವನದ ದುರಸ್ತಿ ಹಾಗೂ ಕಡಪಾ ಮೈದಾನದ ಬಳಕೆಗೆ ಸಂಬಂಧಿಸಿದಂತೆ ಹೋರಾಟ ಸಮಿತಿಯಿಂದ ತಜ್ಞರ ಸಮಿತಿ ರಚಿಸಬೇಕು. ತಜ್ಞರು ನೀಡುವ ಸಲಹೆಯಂತೆ ಕಲಾಭವನವನ್ನು ಸಾರ್ವಜನಿಕ ಬಳಕೆಗೆ ಸಜ್ಜುಗೊಳಿಸಲಾಗುವುದು. ಸದ್ಯ ನಡೆಯುತ್ತಿರುವ ದುರಸ್ತಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದು, ತಜ್ಞರ ಸಲಹೆಯಂತೆ ಕಾಮಗಾರಿ ಕೈಗೊಳ್ಳಲು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಲಾಭವನದ ವೈಭವ ಮತ್ತೆ ಮರುಕಳಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಪಂ. ಎಂ. ವೆಂಕಟೇಶಕುಮಾರ ಆಶಿಸಿದರು. ಕಲಾಭವನಕ್ಕೆ ದೊಡ್ಡ ಸಾಂಸ್ಕೃತಿಕ ಇತಿಹಾಸವಿದ್ದು, ಇಲ್ಲಿ ನಡೆಯುತ್ತಿದ್ದ ರಾಷ್ಟ್ರಮಟ್ಟದ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳ ವೈಭವ ಮತ್ತೆ ಕಾಣುವಂತಾಗಬೇಕು ಎಂದರು.
ಡಾ. ವೀರಣ್ಣ ರಾಜೂರ ಮಾತನಾಡಿ, ಕಲಾಭವನ ಹಾಗೂ ಕಡಪಾ ಮೈದಾನ ಧಾರವಾಡದ ಅಸ್ಮಿತೆ. ಸಾರ್ವಜನಿಕ ಚಟುವಟಿಕೆ, ಹೋರಾಟ ಹಾಗೂ ಭಾಷಣಗಳಿಗೆ ಕಡಪಾ ಮೈದಾನ ಬಳಕೆಯಾಗುತ್ತ ಬಂದಿದ್ದು, ಅದರ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಸೌಂದರ್ಯೀಕರಣ ಮಾಡಬೇಕು. ಕಲಾವಿದರಿಗೆ ಕೈಗೆಟುಕುವ ದರದಲ್ಲಿ ಕಲಾಭವನ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸತೀಶ ತುರಮರಿ, ಡಾ. ಪ್ರಕಾಶ ಗರುಡ, ಬಿ. ಮಾರುತಿ, ಎಂ.ಎಂ. ಚಿಕ್ಕಮಠ, ಬಿ.ಐ. ಇಳಿಗೇರ, ಡಾ. ರಾಜೇಂದ್ರ ಪೊದ್ಧಾರ, ಡಾ. ರಾಮು ಮೂಲಗಿ, ಎಫ್.ವಿ. ಚಿಕ್ಕಮಠ, ಡಾ. ಬಿ.ಎಚ್. ಕುರಿ, ಎಐಡಿಎಸ್‌ಒ ಸಂಚಾಲಕ ಲಕ್ಷ್ಮಣ, ಎಚ್.ಜಿ. ದೇಸಾಯಿ, ಲಕ್ಷ್ಮಣ ಬಕ್ಕಾಯಿ, ಸುರೇಶ ಬೇದರೆ, ಎ.ಎಂ. ಖಾನ್, ಬಿ.ಎನ್. ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



