ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್ಗೆ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ ವಿ. ನಾಡಗೌಡರ ಟಾಸ್ ಮಾಡುವ ಮೂಲಕ ಚಾಲನೆ ನೀಡಿದರು. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ ವಿನ್ನರ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿನ್ನರ್ಸ್ ತಂಡ ನಿಗದಿತ 10 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತು. ನಾಯಕ ಅನಿಲ ತೆಂಬದಮನಿ 35 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ನೈಟ್ ರೈಡರ್ಸ್ ಪರ ಮಂಜು ಪತ್ತಾರ 3 ವಿಕೆಟ್ ಪಡೆದರೆ, ಸುರೇಶ ಕಡ್ಲಿಮಟ್ಟಿ, ಅರುಣಕುಮಾರ ಹಿರೇಮಠ ಹಾಗೂ ವಿಜಯ ಸೊರಟೂರ ತಲಾ ಒಂದು ವಿಕೆಟ್ ಪಡೆದರು.
77 ರನ್ಗಳ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ನಾಯಕ ಸುರೇಶ ಕಡ್ಲಿಮಟ್ಟಿ 38, ಅರುಣಕುಮಾರ ಹಿರೇಮಠ 13 ಹಾಗೂ ಮಂಜು ಪತ್ತಾರ 12 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿನ್ನರ್ಸ್ ಪರ ಅನಿಲ ತೆಂಬದಮನಿ, ಪರಮೇಶ ಲಮಾಣಿ ಹಾಗೂ ಅಶೋಕ ಹೂಗಾರ ತಲಾ ಒಂದು ವಿಕೆಟ್ ಪಡೆದರು. 3 ವಿಕೆಟ್ ಹಾಗೂ 12 ರನ್ ಗಳಿಸಿದ ಮಂಜು ಪತ್ತಾರ ಆಲ್ರೌಂಡ್ ಪ್ರದರ್ಶನದೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆರ್ಸಿಬಿಗೆ ಶಾಕ್; ರೂರಲ್ ಕಿಂಗ್ಸ್ ಜಯಭೇರಿ
ಲೀಗ್ನ ಎರಡನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರೂರಲ್ ಕಿಂಗ್ಸ್ ತಂಡ 7 ವಿಕೆಟ್ಗಳ ಅಂತರದಿಂದ ಜಯಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ನಿಗದಿತ 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ವಿನಾಯಕ ಚೌಡಾಪೂರ 31, ಫಿರೋಜ್ ಮೋಮಿನ್ 19 ಹಾಗೂ ರಾಘವೇಂದ್ರ ಕುಲಕರ್ಣಿ 13 ರನ್ ಗಳಿಸಿದರು. ರೂರಲ್ ಕಿಂಗ್ಸ್ ಪರ ಶಿವಾನಂದ ಹಿರೇಮಠ 4, ನಿಂಗನಗೌಡ ಹನಮಗೌಡ್ರ ಹಾಗೂ ಸಂಜೀವ್ ಪಾಂಡ್ರೆ ತಲಾ ಒಂದು ವಿಕೆಟ್ ಪಡೆದರು.
90 ರನ್ಗಳ ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ 7 ವಿಕೆಟ್ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶಿವಾನಂದ ಹಿರೇಮಠ 37 ಹಾಗೂ ನಿಂಗನಗೌಡ ಹನಮಗೌಡ್ರ 18 ರನ್ ಗಳಿಸಿದರು. ಆರ್ಸಿಬಿ ಪರ ಗಿರೀಶ ಕಮ್ಮಾರ, ಶಿವಕುಮಾರ ಕುಷ್ಟಗಿ ಹಾಗೂ ಫಿರೋಜ್ ಮೋಮಿನ್ ತಲಾ ಒಂದು ವಿಕೆಟ್ ಪಡೆದರು. 4 ವಿಕೆಟ್ ಹಾಗೂ 37 ರನ್ ಗಳಿಸಿದ ಶಿವಾನಂದ ಹಿರೇಮಠ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ ಗದಗ ಮೀಡಿಯಾ ಕ್ರಿಕೆಟ್ ಲೀಗ್ಗೆ ಚಾಲನೆ ನೀಡಿ ಮಾತನಾಡಿದ ಆರ್ಡಿಪಿಆರ್ ವಿವಿ ಕುಲಪತಿ ಸುರೇಶ ವಿ. ನಾಡಗೌಡರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಂತೆಯೇ ಪತ್ರಿಕಾರಂಗಕ್ಕೂ ಮಹತ್ವದ ಸ್ಥಾನವಿದೆ. ಸಮಾಜದ ಹಲವು ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪತ್ರಿಕೋದ್ಯಮ ಅಪಾರ ಕೊಡುಗೆ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಅರುಣಕುಮಾರ ಹಿರೇಮಠ, ವಿನ್ನರ್ಸ್ ತಂಡದ ಮಾಲೀಕರಾದ ಅನಂತ ಕಾರ್ಕಳ, ಸುನೀಲ್ ತೆಂಬದಮನಿ, ಟಿ.ಎನ್. ಭಾಂಡಗೆ, ರೂರಲ್ ಕಿಂಗ್ಸ್ನ ಜಗದೀಶ ಪೂಜಾರ, ಆರ್ಸಿಬಿಯ ಅಜಿತ ಹೊಂಬಾಳಿ, ನೈಟ್ ರೈಡರ್ಸ್ ತಂಡದ ಎಚ್.ಎಂ. ಶರೀಫನವರ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ ಸೇರಿದಂತೆ ಕಾನಿಪ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ಪತ್ರಕರ್ತ ಶಿವಕುಮಾರ ಕುಷ್ಟಗಿ ಕಾರ್ಯಕ್ರಮ ನಿರೂಪಿಸಿದರು.
“ಪತ್ರಕರ್ತರಲ್ಲಿ ವೃತ್ತಿಬದ್ಧತೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ, ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪತ್ರಿಕೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಯಿಂದ ಅಗತ್ಯ ನೆರವು ನೀಡಲಾಗುವುದು.”
— ಸುರೇಶ ವಿ. ನಾಡಗೌಡರ, ಕುಲಪತಿ, ಆರ್ಡಿಪಿಆರ್ ವಿಶ್ವವಿದ್ಯಾಲಯ



