ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಒಕ್ಕಲಗೇರಿ ಓಣಿಯ ಶ್ರೀ ದ್ಯಾಮವ್ವನಕಟ್ಟಿ ಗ್ರಾಮದೇವತೆಯ ಕ್ಷೇತ್ರಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಪುಟ್ಟ ಮಣ್ಣಿನ ಗುಡಿಯಿಂದ ಆರಂಭಗೊಂಡ ಈ ಕ್ಷೇತ್ರ ಇಂದು ಸಾವಿರಾರು ಭಕ್ತರ ಆರಾಧನಾ ಕೇಂದ್ರವಾಗಿದೆ. ಇಲ್ಲಿನ ಜಗಲಿಕಟ್ಟಿ ಮೇಲಿರುವ ಐದು ಅಡಿ ಎತ್ತರದ ಬೃಹತ್ ರಥದ ಕಳಸವು 206 ವರ್ಷಗಳ ಹಿಂದಿನ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದೆ.
ಗದಗದ ಗ್ರಾಮದೇವತೆಗಳ ಹರಿಜಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ನಂಬಿಕೆ, ಹರಕೆ, ಸಂಪ್ರದಾಯ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕ. 2026ರ ಹರಿಜಾತ್ರೋತ್ಸವ ಆಗಸ್ಟ್ 18ರಿಂದ 28ರವರೆಗೆ ನಡೆಯುತ್ತಿದ್ದು, ಗದಗ-ಬೆಟಗೇರಿ ನಗರವೇ ಜಗನ್ಮಾತೆಯ ಆರಾಧನೆಯಲ್ಲಿ ತೊಡಗಿದೆ.
ಆದಿಶಕ್ತಿಗೆ ನಿರ್ದಿಷ್ಟ ನಾಮರೂಪವಿಲ್ಲ ಎಂಬ ಆಧ್ಯಾತ್ಮಿಕ ಪರಿಕಲ್ಪನೆಯ ಪ್ರತಿರೂಪದಂತೆ ದ್ಯಾಮವ್ವನಕಟ್ಟಿ ಕಾಣುತ್ತದೆ. ಇಲ್ಲಿನ ಗರ್ಭಗುಡಿಯಲ್ಲಿ ಭವ್ಯ ಮೂರ್ತಿಯ ಬದಲಾಗಿ ಜಗಲಿಯ ಮೇಲಿರುವ ಗದ್ದುಗೆ ಹಾಗೂ ಅದರ ಮೇಲೆ ಗ್ರಾಮದೇವತೆಯ ಪಾದುಕೆಗಳೇ ಪ್ರಮುಖ ಆರಾಧನಾ ಸ್ವರೂಪ. ಭಕ್ತರ ಅನುಕೂಲಕ್ಕಾಗಿ ಆದಿಶಕ್ತಿಯ ಭಾವಚಿತ್ರವನ್ನು ಇರಿಸಲಾಗಿದ್ದರೂ, ಪಾದಗಟ್ಟಿಯೇ ಕ್ಷೇತ್ರದ ಮೂಲ ಆರಾಧನಾ ಕೇಂದ್ರವಾಗಿದೆ.
ಹಳೆಯ ಕೃತಪುರ ಗ್ರಾಮದಲ್ಲಿ ಗ್ರಾಮದೇವತೆಯರಿಗಾಗಿ ಇದ್ದ ಪುಟ್ಟ ಮಣ್ಣಿನ ಗುಡಿಯೇ ಮುಂದೆ ದ್ಯಾಮವ್ವನಕಟ್ಟಿಯಾಗಿ ಪ್ರಸಿದ್ಧಿಯಾಯಿತು. ಕಿಲ್ಲಾ ಓಣಿಯಿಂದ ಗ್ರಾಮದೇವತೆಗಳನ್ನು ತವರು ಮನೆಗೆ ಬರುವ ಹೆಣ್ಣುಮಕ್ಕಳಂತೆ ವಾದ್ಯಮೇಳದೊಂದಿಗೆ ಒಕ್ಕಲಗೇರಿಗೆ ಕರೆತರುವ ಸಂಪ್ರದಾಯವಿತ್ತು. ಇದೇ ಕಾರಣಕ್ಕೆ ದ್ಯಾಮವ್ವ-ದುರಗವ್ವ ಗ್ರಾಮದೇವತೆಗಳ ತವರುಮನೆ ಎಂಬ ಭಾವನೆ ಜನಮನದಲ್ಲಿ ಗಟ್ಟಿಯಾಯಿತು.
ಸುಮಾರು ಆರು-ಏಳು ದಶಕಗಳ ಹಿಂದೆ ಅಬ್ಬಿಗೇರಿ ಮನೆತನದ ಶ್ರೀ ಬಸಪ್ಪ ಕರಬಸಪ್ಪ ಅಬ್ಬಿಗೇರಿ ಅವರು ಪುಟ್ಟ ಮಣ್ಣಿನ ಗುಡಿಯನ್ನು ಬೃಹತ್ ದೇವಾಲಯವನ್ನಾಗಿ ನಿರ್ಮಿಸಲು ಮುಂದಾದರು. ಸಂಗಯ್ಯ ಗುಡ್ಡಿಮಠ, ವಿರುಪಾಕ್ಷಗೌಡ ಪೊಲೀಸ್ಪಾಟೀಲ, ನಾಗಯ್ಯ ಶಿವಪ್ಪಯ್ಯನಮಠ, ಯಲ್ಲಪ್ಪ ಗುಗ್ಗರಿ, ಶಿವಪ್ಪ ಮಾನ್ವಿ, ಫಕ್ಕೀರಪ್ಪ ಕಂಬಳಿ ಸೇರಿದಂತೆ ವಿವಿಧ ಸಮುದಾಯಗಳ ಅನೇಕರು ಕೈಜೋಡಿಸಿದರು. ಹೀಗಾಗಿ ದ್ಯಾಮವ್ವನಕಟ್ಟಿ ಸರ್ವರ ಭಕ್ತಿಯ ಕ್ಷೇತ್ರವಾಗಿ ಬೆಳೆಯಿತು.
ಈ ಕ್ಷೇತ್ರದ ಇತಿಹಾಸದಲ್ಲಿ 1820ರ ರಥದ ಕಳಸಕ್ಕೆ ವಿಶೇಷ ಸ್ಥಾನವಿದೆ. ಕಳಸದ ಮೇಲಿನ ಲಿಖಿತ ಉಲ್ಲೇಖದ ಪ್ರಕಾರ, ‘1820, ಆಗಸ್ಟ್ 3, ಮಾನ್ವಿಯವರು ಕೊಡಿಸಿದ್ದು, ಗ್ರಾಮದೇವತೆಯರ ರಥದ ಕಳಸ’ ಎಂಬ ದಾಖಲೆಯಿದೆ. ಆಗ 18 ಗಾಲಿಯ ಬೃಹತ್ ರಥದಲ್ಲಿ ಗ್ರಾಮದೇವತೆಗಳನ್ನು ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಸಲಾಗುತ್ತಿತ್ತು.
ಆದರೆ ಮೂರನೇ ವರ್ಷದ ರಥೋತ್ಸವದಲ್ಲಿ ಒಕ್ಕಲಗೇರಿಯ ದ್ಯಾಮವ್ವನ ಪಾದಗಟ್ಟಿಗೆ ಬಂದ ರಥ ಮುಂದೆ ಸಾಗಲಿಲ್ಲ ಎನ್ನುವುದು ಕ್ಷೇತ್ರದ ನಂಬಿಕೆ. ಎಷ್ಟೇ ಪ್ರಯತ್ನಿಸಿದರೂ ರಥ ಕದಲದ ಹಿನ್ನೆಲೆಯಲ್ಲಿ, ಪ್ರತಿವರ್ಷ ರಥೋತ್ಸವ ನಡೆಸುವ ಬದಲು 12 ವರ್ಷಕ್ಕೊಮ್ಮೆ ಹರಕೆ ತೀರಿಸುವ ಜಾತ್ರೆ ನಡೆಸಲು ದೈವದ ಜನರು ನಿರ್ಧರಿಸಿದರು. ರಥದ ಕಳಸವನ್ನು ದ್ಯಾಮವ್ವನ ಜಗಲಿಯ ಮೇಲಿನ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವೂ ಅಂದಿನಿಂದ ಆರಂಭವಾಯಿತು. ಹೀಗೆ ‘ಹರಕೆ ಜಾತ್ರೆ’ ಮುಂದೆ ‘ಹರಿಜಾತ್ರೆ’ಯಾಗಿ ಪ್ರಸಿದ್ಧಿಯಾಯಿತು.

ಹರಿಜಾತ್ರೆಯಲ್ಲಿ ಗ್ರಾಮದೇವತೆಗಳ ಮೂರ್ತಿಗಳಿಗೆ ಬಣ್ಣ-ಅಲಂಕಾರ ಮಾಡಿ ತಡರಾತ್ರಿ ಕಿಲ್ಲಾ ಓಣಿಯಿಂದ ಒಕ್ಕಲಗೇರಿಗೆ ಕರೆತರಲಾಗುತ್ತದೆ. ಬೆಳಗಿನ ಜಾವ ಪ್ರತಿಷ್ಠಾಪಿಸಿ ಕಣ್ಣು ಬರೆಯುವ ವಿಶೇಷ ವಿಧಿ ನೆರವೇರಿಸಲಾಗುತ್ತದೆ. ಕನ್ನಡಿಯಲ್ಲಿ ಪ್ರತಿಬಿಂಬ ನೋಡುತ್ತಾ ಕಣ್ಣು ಬರೆಯುವುದು ಇಲ್ಲಿನ ಅಪರೂಪದ ಆಚರಣೆ.
ಒಂಬತ್ತು ದಿನಗಳ ಕಾಲ ಭಕ್ತರು ವಿವಿಧ ನಿಯಮಗಳನ್ನು ಪಾಲಿಸುತ್ತಾರೆ. ಉಡಿ ತುಂಬುವುದು, ಕಾಯಿ ಒಡೆಯುವುದು, ಭಂಡಾರ ಲೇಪಿಸುವುದು, ಮೆರವಣಿಗೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳು ನಡೆಯುತ್ತವೆ. ಈ ಜಾತ್ರೆ ಎಲ್ಲ ಜಾತಿ-ಧರ್ಮದವರಿಗೂ ಮುಕ್ತವಾಗಿದ್ದು, ಹರಕೆ ತೀರಿಸುವುದೇ ಇದರ ಮೂಲ ಆಶಯವಾಗಿದೆ.
2026ರ ಹರಿಜಾತ್ರೆಯ ಅಂಗವಾಗಿ ಆಗಸ್ಟ್ 18ರಿಂದ ಉಡಿ ತುಂಬುವ ಕಾರ್ಯಕ್ರಮ ಆರಂಭಗೊಂಡಿದ್ದು, ಆಗಸ್ಟ್ 25ರಂದು ಊರ ದೇವರಿಗೆ ಉಡಿ ತುಂಬಿ ಕಾಯಿ ಒಡೆಯಲಾಗುತ್ತದೆ. ಆಗಸ್ಟ್ 26ರಂದು ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕಿಲ್ಲಾ ಓಣಿಗೆ ಕಳಿಸಿಕೊಡಲಾಗುತ್ತದೆ. 27ರಂದು ಸೇವೆ ಸಲ್ಲಿಸಿದ ಭಕ್ತರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಗುತ್ತದೆ. 28ರಂದು ರುದ್ರಾಭಿಷೇಕ, ಹೋಮ-ಹವನ ಹಾಗೂ ಮಹಾಪ್ರಸಾದ ನಡೆಯಲಿದೆ.
— ಜಿ.ಬಿ. ಹಾವಣಗಿ, ಶಿಕ್ಷಕರು



