ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೇಡಂ ಭಿಕಾಜಿ ಕಾಮಾ ಅವರ ಹೆಸರು ಅಚ್ಚಳಿಯದೆ ಉಳಿದಿದೆ. ದೇಶವೇ ತನ್ನ ಮನೆ, ಭಾರತದ ಸ್ವಾತಂತ್ರ್ಯವೇ ತನ್ನ ಬದುಕಿನ ಗುರಿ ಎಂದು ನಂಬಿ ಹೋರಾಡಿದ ಅವರು, ವಿದೇಶಿ ನೆಲದಲ್ಲಿ ಭಾರತದ ಸ್ವಾತಂತ್ರ್ಯದ ಧ್ವಜ ಹಾರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1861ರ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ಭಿಕಾಜಿ ಕಾಮಾ, ವಿದ್ಯಾರ್ಥಿ ದೆಸೆಯಿಂದಲೇ ಆದರ್ಶಪ್ರಾಯ ಹಾಗೂ ನೇರನುಡಿಯ ವ್ಯಕ್ತಿತ್ವ ಹೊಂದಿದ್ದರು. 1885ರಲ್ಲಿ ಖ್ಯಾತ ವಕೀಲ ರುಸ್ತುಂ ಕಾಮಾ ಅವರನ್ನು ವಿವಾಹವಾದರೂ, ದೇಶದ ಸ್ವಾತಂತ್ರ್ಯದ ಹೋರಾಟದತ್ತ ಅವರ ಒಲವು ಹೆಚ್ಚಾಯಿತು.
1897ರಲ್ಲಿ ಮುಂಬೈನಲ್ಲಿ ಪ್ಲೇಗ್ ರೋಗ ಹರಡಿದಾಗ ಜನರ ಸೇವೆಗೆ ಧಾವಿಸಿದ ಕಾಮಾ ಅವರಿಗೂ ಸೋಂಕು ತಗುಲಿತು. ಚಿಕಿತ್ಸೆಗಾಗಿ ಲಂಡನ್ಗೆ ತೆರಳಿದ ಅವರು ಶ್ಯಾಮಜಿ ಕೃಷ್ಣವರ್ಮಾ ಹಾಗೂ ದಾದಾಭಾಯಿ ನವರೋಜಿ ಸೇರಿದಂತೆ ಹಲವು ರಾಷ್ಟ್ರೀಯವಾದಿಗಳ ಸಂಪರ್ಕಕ್ಕೆ ಬಂದರು. ದಾದಾಭಾಯಿ ನವರೋಜಿಯವರ ವೈಯಕ್ತಿಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು.
ಬ್ರಿಟಿಷರ ಒತ್ತಡದ ನಡುವೆಯೂ ಸ್ವಾತಂತ್ರ್ಯ ಚಟುವಟಿಕೆ ನಿಲ್ಲಿಸಲು ನಿರಾಕರಿಸಿದ ಅವರು ಪ್ಯಾರಿಸ್ಗೆ ತೆರಳಿ ಅಲ್ಲಿಂದಲೇ ಹೋರಾಟ ಮುಂದುವರಿಸಿದರು.
ವಿದೇಶಿ ನೆಲದಲ್ಲಿ ತ್ರಿವರ್ಣದ ಮುನ್ನೋಟ
1907ರ ಆಗಸ್ಟ್ 22ರಂದು ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಾರತದ ಸ್ವಾತಂತ್ರ್ಯದ ಧ್ವಜವನ್ನು ಭಿಕಾಜಿ ಕಾಮಾ ಹಾರಿಸಿದರು. ಆ ಮೂಲಕ ವಿದೇಶಿ ನೆಲದಲ್ಲಿ ಭಾರತದ ಧ್ವಜ ಹಾರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅವರು ಹಾರಿಸಿದ ಧ್ವಜ ಇಂದಿನ ತ್ರಿವರ್ಣ ಧ್ವಜದಂತಿರಲಿಲ್ಲ. ಹಸಿರು, ಹಳದಿ ಮತ್ತು ಕೆಂಪು ಪಟ್ಟಿಗಳಿದ್ದ ಆ ಧ್ವಜದಲ್ಲಿ ಕಮಲದ ಹೂವುಗಳು, ‘ವಂದೇ ಮಾತರಂ’ ಬರಹ, ಸೂರ್ಯ ಮತ್ತು ಚಂದ್ರನ ಚಿಹ್ನೆಗಳಿದ್ದವು. ಭಾರತದ ಸ್ವಾತಂತ್ರ್ಯದ ಸಂಕೇತವಾಗಿ ಈ ಧ್ವಜವನ್ನು ವಿಶ್ವದ ವೇದಿಕೆಯಲ್ಲಿ ಪ್ರದರ್ಶಿಸಿದ ಕಾಮಾ, ಭಾರತೀಯರು ಒಗ್ಗಟ್ಟಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಬ್ರಿಟಿಷರು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರೂ, ಕಾಮಾ ತಮ್ಮ ಹೋರಾಟ ನಿಲ್ಲಿಸಲಿಲ್ಲ. ದೀರ್ಘಕಾಲ ಯುರೋಪ್ನಲ್ಲಿ ಇದ್ದು ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡಿದ ಅವರು 1935ರಲ್ಲಿ ಭಾರತಕ್ಕೆ ಮರಳಿದರು. 1936ರ ಆಗಸ್ಟ್ 13ರಂದು ನಿಧನರಾದರು.
ರಾಷ್ಟ್ರಧ್ವಜ: ನಮ್ಮ ಹೆಮ್ಮೆ
ಇಂದು ನಾವು ಹಾರಿಸುವ ತ್ರಿವರ್ಣ ಧ್ವಜದ ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಹಾಗೂ ಕೆಳಭಾಗದಲ್ಲಿ ಹಸಿರು ಬಣ್ಣಗಳಿವೆ. ಮಧ್ಯದಲ್ಲಿ ನೇವಿ ನೀಲಿ ಬಣ್ಣದ ಅಶೋಕ ಚಕ್ರವಿದ್ದು, ಅದರಲ್ಲಿ 24 ಕಡ್ಡಿಗಳಿವೆ. ಧ್ವಜದ ಉದ್ದ-ಅಗಲದ ಅನುಪಾತ 3:2.
ಕೇಸರಿ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಸತ್ಯ ಮತ್ತು ಶಾಂತಿಯನ್ನು, ಹಸಿರು ಸಮೃದ್ಧಿ ಹಾಗೂ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.
ರಾಷ್ಟ್ರಧ್ವಜದ ಬಳಕೆ ಮತ್ತು ಪ್ರದರ್ಶನಕ್ಕೆ ಭಾರತದ ಧ್ವಜ ಸಂಹಿತೆ, 2002 ಹಾಗೂ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971 ಅನ್ವಯಿಸುತ್ತವೆ. ಧ್ವಜದ ಗೌರವ ಮತ್ತು ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ರಾಷ್ಟ್ರಧ್ವಜ ಕೇವಲ ಮೂರು ಬಣ್ಣಗಳ ಬಟ್ಟೆಯಲ್ಲ. ಅದು ಕೋಟ್ಯಂತರ ಭಾರತೀಯರ ಸ್ವಾತಂತ್ರ್ಯದ ಕನಸು, ತ್ಯಾಗದ ನೆನಪು ಮತ್ತು ದೇಶಭಕ್ತಿಯ ಸಂಕೇತ.
ಮೇಡಂ ಭಿಕಾಜಿ ಕಾಮಾ ಅವರಂತಹ ಧೀಮಂತ ಹೋರಾಟಗಾರ್ತಿಯ ತ್ಯಾಗವನ್ನು ಸ್ಮರಿಸುತ್ತಾ ತ್ರಿವರ್ಣವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.
ತ್ರಿವರ್ಣ ನಮ್ಮ ಹೆಮ್ಮೆ.
ತ್ರಿವರ್ಣ ನಮ್ಮ ಗೌರವ.
ತ್ರಿವರ್ಣ ನಮ್ಮ ದೇಶದ ಆತ್ಮ.
– ಡಾ. ತಯಬಅಲಿ ಅ. ಹೊಂಬಳ, ಗದಗ



