ವೃತ್ತಿಯಲ್ಲಿ ಯಶಸ್ಸು ಗಳಿಸುವುದು ಒಂದು ಸಾಧನೆಯಾದರೆ, ಆ ಯಶಸ್ಸನ್ನು ಸಮಾಜದ ಒಳಿತಿಗೆ ಬಳಸುವುದು ಅದಕ್ಕಿಂತ ದೊಡ್ಡ ಸಾಧನೆ. ವೃತ್ತಿಪರ ಬದ್ಧತೆ, ಉದ್ಯಮಶೀಲತೆ, ಸಂಘಟನಾ ನಾಯಕತ್ವ, ಶಿಕ್ಷಣ, ಆರೋಗ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಸೇವೆಯನ್ನು ಜೀವನದ ಭಾಗವಾಗಿಸಿಕೊಂಡಿರುವ ಆನಂದ ಲಕ್ಷ್ಮಣರಾವ್ ಪೋತ್ನೀಸ್ ಮತ್ತು ಈಶ್ವರಪ್ಪ ಚಂದ್ರಶೇಖರಪ್ಪ ಮುನವಳ್ಳಿ (ಈಶಣ್ಣ ಮುನವಳ್ಳಿ) ಅವರ ಸೇವೆಗೆ ಇದೀಗ ಮತ್ತೊಂದು ಪ್ರತಿಷ್ಠಿತ ಗೌರವ ಸಂದಿದೆ.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಆ.೧೪ರಿಂದ ೧೮ರವರೆಗೆ ನಡೆಯಲಿರುವ ‘ಗದಗ ಉತ್ಸವ–೨೦೨೬’ರ ಅಂಗವಾಗಿ ಆ.೧೬ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಇಬ್ಬರು ಹಿರಿಯ ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಉದ್ಯಮ–ವಾಣಿಜ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುವುದರ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಇಬ್ಬರ ಸೇವಾ ಪಯಣ ಗದಗದ ಸಾರ್ವಜನಿಕ ಬದುಕಿನ ಹಲವು ಆಯಾಮಗಳನ್ನು ಒಳಗೊಂಡಿದೆ.
ವೃತ್ತಿಯ ಶಿಸ್ತು, ಸಮಾಜದ ಕಾಳಜಿ; ಆನಂದ ಪೋತ್ನೀಸ್
ಹಿರಿಯ ಲೆಕ್ಕ ಪರಿಶೋಧಕರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವೃತ್ತಿಪರ ಸೇವೆ ಸಲ್ಲಿಸಿರುವ ಆನಂದ ಲಕ್ಷ್ಮಣರಾವ್ ಪೋತ್ನೀಸ್ ಅವರ ಕಾರ್ಯಕ್ಷೇತ್ರ ಕೇವಲ ಲೆಕ್ಕಪರಿಶೋಧನೆಗೆ ಸೀಮಿತವಾಗಿಲ್ಲ. ಶಿಕ್ಷಣ, ಉದ್ಯಮ, ಆರೋಗ್ಯ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
೧೫ ಮೇ ೧೯೫೯ರಂದು ಜನಿಸಿದ ಅವರು ಬಿಕಾಂ ಹಾಗೂ ಎಫ್‌ಸಿಎ ಪದವಿ ಪಡೆದಿದ್ದು, ೧೭ ಫೆಬ್ರವರಿ ೧೯೮೨ರಂದು ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿ ಜೀವನ ಆರಂಭಿಸಿದರು. ಪ್ರಸ್ತುತ ‘ಮೆ. ಎ. ರಾಘವೇಂದ್ರ ರಾವ್ & ಅಸೋಸಿಯೇಟ್ಸ್’ ಸಂಸ್ಥೆಯ ಪಾಲುದಾರರಾಗಿ ಸೇವೆ ಸಲ್ಲಿಸುತ್ತಿರುವ ಅವರು ಲೆಕ್ಕಪರಿಶೋಧನೆ ಹಾಗೂ ಮಾಹಿತಿ ವ್ಯವಸ್ಥೆಗಳ ಆಡಿಟ್ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ.
ವೃತ್ತಿಯ ಜತೆಗೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಪೋತ್ನೀಸ್ ಅವರು ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್, ಜಿಲ್ಲೆ ೩೨೪–ಡಿ೨ರಲ್ಲಿ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಹಾಗೂ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಗದಗ–ಬೆಟಗೇರಿ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿಯೂ ಪೋತ್ನೀಸ್ ಅವರ ಸೇವೆ ಗಮನಾರ್ಹ. ಆದರ್ಶ ಶಿಕ್ಷಣ ಸಮಿತಿ, ಗದಗ–ಬೆಟಗೇರಿ ಲಯನ್ಸ್ ಎಜುಕೇಶನ್ ಸೊಸೈಟಿ, ವಿವೇಕಾನಂದ ಪಿಯು ವಿಜ್ಞಾನ ವಸತಿ ಕಾಲೇಜು ಹಾಗೂ ಎ.ಎಸ್.ಎಸ್. ಕಾಲೇಜ್ ಆಫ್ ಕಾಮರ್ಸ್ ಹಳೆಯ ವಿದ್ಯಾರ್ಥಿಗಳ ಸಂಘ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿದ್ದಾರೆ.
೨೦೨೦–೨೧ರಲ್ಲಿ ಗದಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಕೈಗಾರಿಕಾ ಪ್ರದರ್ಶನ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ, ಸ್ಥಳೀಯ ವ್ಯಾಪಾರ, ಉದ್ಯಮ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು.
ಸಹಕಾರ ಕ್ಷೇತ್ರದಲ್ಲಿ ರಡ್ಡಿ ಕೋ-ಆಪ್ ಬ್ಯಾಂಕ್ ಲಿಮಿಟೆಡ್, ಧಾರವಾಡದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅವರು, ಗದಗದ ಪಿ.ಜಿ. ಕೇಂದ್ರದಲ್ಲಿ ಕಾರ್ಪೊರೇಟ್ ತೆರಿಗೆ ಯೋಜನೆ ಕುರಿತು ಸಂಪನ್ಮೂಲ ಅಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಶ್ರೀ ವೀರನಾರಾಯಣ, ಶ್ರೀ ತ್ರಿಕೂಟೇಶ್ವರ ಹಾಗೂ ಜುಮ್ಮಾ ಮಸೀದಿ ಟ್ರಸ್ಟ್ ಕಮಿಟಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವುದು ಅವರ ಸಾಮಾಜಿಕ ಬದ್ಧತೆಗೆ ಮತ್ತೊಂದು ಉದಾಹರಣೆ.
‘ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್’ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಪೋತ್ನೀಸ್, ಮೂತ್ರಪಿಂಡ ಕಸಿ ಅಗತ್ಯವಿರುವವರಿಗೆ ಆರ್ಥಿಕ ನೆರವು ದೊರಕಿಸುವ ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ವೃತ್ತಿಪರತೆ, ಸಂಘಟನಾ ಸಾಮರ್ಥ್ಯ ಹಾಗೂ ಸಮಾಜಮುಖಿ ಚಿಂತನೆಯ ಸಮನ್ವಯವಾಗಿರುವ ಅವರ ಸೇವೆಯನ್ನು ಗುರುತಿಸಿ ನೀಡಲಾಗುತ್ತಿರುವ ಜೀವಮಾನ ಸಾಧನೆ ಪ್ರಶಸ್ತಿ, ಗದಗದ ವಾಣಿಜ್ಯ ಹಾಗೂ ಸಾರ್ವಜನಿಕ ಬದುಕಿಗೆ ಸಲ್ಲಿಸಿದ ಕೊಡುಗೆಗೆ ಸಂದ ಗೌರವವಾಗಿದೆ.
ಉದ್ಯಮದ ಜತೆಗೆ ಸಮಾಜಸೇವೆ; ಈಶಣ್ಣ ಮುನವಳ್ಳಿಯ ವಿಭಿನ್ನ ಪಯಣ
ಉದ್ಯಮ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿರುವ ಈಶ್ವರಪ್ಪ ಚಂದ್ರಶೇಖರಪ್ಪ ಮುನವಳ್ಳಿ (ಈಶಣ್ಣ ಮುನವಳ್ಳಿ) ಅವರ ಸೇವಾ ಪಯಣ ಉದ್ಯಮದ ಗಡಿಯನ್ನು ಮೀರಿ ಶಿಕ್ಷಣ, ಸಮಾಜಸೇವೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೂ ವಿಸ್ತರಿಸಿದೆ.
೪ ಮೇ ೧೯೬೬ರಂದು ಕೊಪ್ಪಳದಲ್ಲಿ ಜನಿಸಿದ ಅವರು ಗದಗದ ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ೧೯೮೫ರಲ್ಲಿ ಗಂಗಾವತಿಯ ಸಿದ್ಧಲಿಂಗೇಶ್ವರ ರೈಸ್ ಮಿಲ್ ಮೂಲಕ ಉದ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು, ನಂತರ ವಿವಿಧ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ತಮ್ಮ ವ್ಯಾಪಾರ ವಲಯವನ್ನು ವಿಸ್ತರಿಸಿಕೊಂಡರು.
೧೯೯೩ರಲ್ಲಿ ಸಿದ್ಧಲಿಂಗೇಶ್ವರ ಟ್ರೇಡರ್ಸ್, ೧೯೯೮ರಲ್ಲಿ ಸಿ.ಆರ್. ಮುನವಳ್ಳಿ & ಸನ್ಸ್ ಹಾಗೂ ಈಶ್ವರ ಎಂಟರ್‌ಪ್ರೈಸಸ್, ೨೦೦೨ರಲ್ಲಿ ಪೆಟ್ರೋಲ್ ಬಂಕ್, ೨೦೧೩ರಲ್ಲಿ ಹಾತಲಗೇರಿಯಲ್ಲಿ ಕಚ್ಚಾ–ಪಾಲಿಶ್ ಮಿಲ್ ಹಾಗೂ ಸೋಲಾರ್ ಉದ್ಯಮ ಸ್ಥಾಪಿಸಿ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
೨೦೨೩–೨೪ರಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಚೇಂಬರ್ ಪತ್ರಿಕೆಯನ್ನು ಪುನರಾರಂಭಿಸುವ ಮೂಲಕ ಸಂಸ್ಥೆಯ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿದರು.
ಉದ್ಯಮದ ಜತೆಗೆ ಸಮಾಜಸೇವೆಯಲ್ಲೂ ಸಕ್ರಿಯರಾಗಿರುವ ಅವರು, ವೀರಶೈವ–ಲಿಂಗಾಯತ ರುದ್ರಭೂಮಿಗೆ ಸ್ವಂತ ಶವಸಂಸ್ಕಾರ ವಾಹನ ಹಾಗೂ ಜೆಸಿಬಿ ವ್ಯವಸ್ಥೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರೋಟರಿ ಕ್ಲಬ್‌ಗೆ ಸ್ವಂತ ಕಟ್ಟಡ ನಿರ್ಮಾಣದಲ್ಲಿಯೂ ಕೊಡುಗೆ ನೀಡಿರುವ ಅವರು, ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷರಾಗಿ ಸಂಭಾಪುರ ರಸ್ತೆಯಲ್ಲಿ ಸುಮಾರು ₹೫ ಕೋಟಿ ವೆಚ್ಚದ ಸಮಾಜದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ವಿವಿಧ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರಾಗಿ, ಎಡೆಯೂರು ಹಾಗೂ ಹಾಲಕೇರಿ ಮಠಗಳ ಸದಸ್ಯರಾಗಿ ಹಾಗೂ ಬಸವೇಶ್ವರ ಮತ್ತು ಡಾ. ಪ್ರಭಾಕರ ಕೋರೆ ಬ್ಯಾಂಕ್‌ಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಸುಮಾರು ೮ ಸಾವಿರ ಜನರಿಗೆ ಉಚಿತ ಆರೋಗ್ಯ ಶಿಬಿರದ ಪ್ರಯೋಜನ ದೊರಕುವಂತೆ ಮಾಡಿರುವ ಅವರು, ಎಡೆಯೂರು ದಾಸೋಹ ಟ್ರಸ್ಟ್ ಹಾಗೂ ಬೆಂಗಳೂರಿನ ಕಲ್ಯಾಣ ಮಂಟಪಕ್ಕೆ ಸ್ವಂತ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಕ್ಕೂ ಸಹಕರಿಸಿದ್ದಾರೆ.
ಉದ್ಯಮದ ಯಶಸ್ಸಿನ ಜತೆಗೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಂಡಿರುವ ಈಶಣ್ಣ ಮುನವಳ್ಳಿಯವರಿಗೆ ಸಂದಿರುವ ಜೀವಮಾನ ಸಾಧನೆ ಪ್ರಶಸ್ತಿ, ಅವರ ಬಹುಮುಖ ಸೇವೆಗೆ ಸಂದಿರುವ ಗೌರವವಾಗಿದೆ.
ಒಬ್ಬರು ವೃತ್ತಿಪರ ಸೇವೆ, ಶಿಕ್ಷಣ, ಆರೋಗ್ಯ ಮತ್ತು ಸಂಘಟನಾ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿದ್ದರೆ, ಮತ್ತೊಬ್ಬರು ಉದ್ಯಮ, ಸಮಾಜಸೇವೆ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.
ಗದಗದ ವಾಣಿಜ್ಯ–ಉದ್ಯಮ ಕ್ಷೇತ್ರದ ಬೆಳವಣಿಗೆಯೊಂದಿಗೆ ಸಮಾಜದ ವಿವಿಧ ವಲಯಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಿರುವ ಈ ಇಬ್ಬರು ಹಿರಿಯ ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸುತ್ತಿರುವುದು ‘ಗದಗ ಉತ್ಸವ–೨೦೨೬’ರ ಪ್ರಶಸ್ತಿ ಪ್ರದಾನ ಸಮಾರಂಭದ ವಿಶೇಷತೆಯಾಗಿದೆ.
ಆ.೧೬ರಂದು ನಡೆಯುವ ಸಮಾರಂಭದಲ್ಲಿ ಆನಂದ ಪೋತ್ನೀಸ್ ಹಾಗೂ ಈಶಣ್ಣ ಮುನವಳ್ಳಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನವಾಗಲಿದೆ.
– ಈರಣ್ಣ ಮುದಗಲ್, ನಾಗರಾಜ ನರಗುಂದ
ಉತ್ಸವದ ಪ್ರಚಾರ ಸಮಿತಿ

