HomeGadag Newsಮೂಲಸೌಕರ್ಯ ವೈಫಲ್ಯಕ್ಕೆ ಗ್ರಾಮಸ್ಥರ ಆಕ್ರೋಶ: ಇಬ್ಬರು ಅಧಿಕಾರಿಗಳ ಬದಲಾವಣೆ

ಮೂಲಸೌಕರ್ಯ ವೈಫಲ್ಯಕ್ಕೆ ಗ್ರಾಮಸ್ಥರ ಆಕ್ರೋಶ: ಇಬ್ಬರು ಅಧಿಕಾರಿಗಳ ಬದಲಾವಣೆ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ನಡೆಸಿದ ಎರಡು ದಿನಗಳ ಪ್ರತಿಭಟನೆಗೆ ಸ್ಪಂದಿಸಿದ ತಾಲೂಕು ಪಂಚಾಯಿತಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶರಣು ಗೋಗೇರಿ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಪಿಡಿಒ ಅಮೀರನಾಯಕ ಅವರ ವರ್ಗಾವಣೆಗೆ ಕ್ರಮ ಕೈಗೊಂಡಿದ್ದಾರೆ.

ಅಸಮರ್ಪಕ ಕುಡಿಯುವ ನೀರು ಪೂರೈಕೆ, ಅವೈಜ್ಞಾನಿಕ ಜೆಜೆಎಂ ಕಾಮಗಾರಿ, ರಸ್ತೆಗಳ ಅಸ್ವಚ್ಛತೆ, ಬೀದಿ ದೀಪಗಳ ಸಮಸ್ಯೆ, ರಾಜಬೀದಿ ದುರಸ್ತಿ, ಸಿಬ್ಬಂದಿಗೆ ವೇತನ ಪಾವತಿಯಲ್ಲಿ ವಿಳಂಬ ಹಾಗೂ ಸಿಬ್ಬಂದಿಯ ಮೇಲೆ ಅಧಿಕಾರಿಗಳ ಹಿಡಿತವಿಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗ್ರಾಮಸ್ಥರು ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್. ಜನಗಿ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು. ಗ್ರಾಮಸ್ಥರು ಕಳೆದ ಆರು ತಿಂಗಳಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದ್ದು, ಆಡಳಿತಾಧಿಕಾರಿ ಹಾಗೂ ಪಿಡಿಒ ನಡುವೆ ಸಮನ್ವಯದ ಕೊರತೆಯಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿವೆ ಎಂದು ಆರೋಪಿಸಿದರು.

ಗ್ರಾಮಸ್ಥರ ಅಸಮಾಧಾನ ಆಲಿಸಿದ ಬಳಿಕ ಅಧಿಕಾರಿಗಳು ಆಡಳಿತಾಧಿಕಾರಿ ಶರಣು ಗೋಗೇರಿ ಅವರಿಂದ ಕರ್ತವ್ಯ ಬಿಡುಗಡೆ ಪತ್ರ ಹಾಗೂ ಪಿಡಿಒ ಅಮೀರನಾಯಕ ಅವರಿಂದ ವರ್ಗಾವಣೆ ಮನವಿ ಪತ್ರ ಪಡೆದುಕೊಂಡರು.

ಲಕ್ಕುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಜಿ.ಪಂ. ಹಾಗೂ ತಾ.ಪಂ. ಮಟ್ಟದಲ್ಲಿ ಅಗತ್ಯ ಅನುದಾನವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಐತಿಹಾಸಿಕ ಲಕ್ಕುಂಡಿ ಗ್ರಾಮದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಡಾ. ಎಚ್.ಎಸ್. ಜನಗಿ ಭರವಸೆ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ ಹಾಗೂ ನಜೀರಅಹ್ಮದ್ ಕಿರಿಟಗೇರಿ ಮಾತನಾಡಿ, ಗ್ರಾಮದ ಸಮಸ್ಯೆಗಳ ಕುರಿತು ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಯಿತು ಎಂದರು.

ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಇಬ್ಬರು ಅಧಿಕಾರಿಗಳ ಬದಲಾವಣೆಗೆ ಕ್ರಮ ಕೈಗೊಂಡು, ಲಕ್ಕುಂಡಿ ಗ್ರಾಮದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವ ಭರವಸೆ ನೀಡಿರುವುದರಿಂದ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ವಿಬಿಜಿ ರಾಮ್‌ಜಿ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಕಾರ್ಯದರ್ಶಿ ಗಣೇಶ ಪೂಜಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿವಪ್ಪ ಸಜ್ಜನರ, ಗ್ರಾ.ಪಂ. ಮಾಜಿ ಸದಸ್ಯ ಬಿ.ಬಿ. ಮಾಡಲಗೇರಿ, ಮರಿಯಪ್ಪ ವಡ್ಡರ, ಕಳಕೇಶ ಟೆಂಗಿನಕಾಯಿ, ಚಂದ್ರಗೌಡ ಪಾಟೀಲ, ಚನ್ನಪ್ಪ ಹುಬ್ಬಳ್ಳಿ, ಬಸವರಾಜ ಮುಳ್ಳಾಳ, ಬಸವರಾಜ ಕವಲೂರು, ಪ್ರವೀಣ ಕಲಾಲ, ವಿನಾಯಕ ಡಿಗ್ಗಾವಿ, ಮಂಜುನಾಥ ತಡಹಾಳ, ಬಸವರಾಜ ಕುಂಬಾರ, ವೀರಣ್ಣ ಅರಹುಣಶಿ, ಶಿವಪ್ಪ ಭಜಂತ್ರಿ, ರವಿ ಕವಲೂರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img