HomeArt and Literatureಮಕ್ಕಳ ಮನ ಗೆಲ್ಲುವಲ್ಲಿ ಸೋಲಿಲ್ಲದ 'ನಿಂಗು' ಸೊಲಗಿ..!

ಮಕ್ಕಳ ಮನ ಗೆಲ್ಲುವಲ್ಲಿ ಸೋಲಿಲ್ಲದ ‘ನಿಂಗು’ ಸೊಲಗಿ..!

For Dai;y Updates Join Our whatsapp Group

ಶಿಕ್ಷಕರು ಸಾವಿರಾರು ಜನರಿರಬಹುದು. ಸಾಹಿತಿಗಳೂ ಅನೇಕರಿರಬಹುದು. ಆದರೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು, ಅವರ ಕನಸುಗಳಿಗೆ ಬಣ್ಣ ತುಂಬಿ, ಬದುಕಿಗೆ ದಿಕ್ಕು ತೋರಿಸುವ ಶಿಕ್ಷಕರು ಮಾತ್ರ ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವವೇ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮಕ್ಕಳ ಅಚ್ಚುಮೆಚ್ಚಿನ ಸಾಹಿತಿ, ನಾಟಕಕಾರ ಹಾಗೂ ಶಿಕ್ಷಣ ಚಿಂತಕ ಡಾ. ನಿಂಗು ಸೊಲಗಿ.

ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠದ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ನಿಂಗು ಸೊಲಗಿ ಆಯ್ಕೆಯಾಗಿರುವುದು ಕೇವಲ ಅವರಿಗಷ್ಟೇ ಸಂದ ಗೌರವವಲ್ಲ; ಮಕ್ಕಳ ಸಾಹಿತ್ಯ, ಶಿಕ್ಷಣ ಮತ್ತು ಸೃಜನಶೀಲತೆಗೆ ಸಂದ ಗೌರವವಾಗಿದೆ.

ರೋಣ ತಾಲೂಕಿನ ಕೌಜಗೇರಿ ಎಂಬ ಪುಟ್ಟ ಗ್ರಾಮದಲ್ಲಿ 1968ರ ಜುಲೈ 10ರಂದು ಬಡ ಕುಟುಂಬದಲ್ಲಿ ಜನಿಸಿದ ನಿಂಗು ಸೊಲಗಿ ಅವರ ಬಾಲ್ಯ ಸುಖಮಯವಾಗಿರಲಿಲ್ಲ. ಬಡತನ, ಸಂಕಷ್ಟ, ಅಭಾವಗಳ ನಡುವೆಯೇ ಶಿಕ್ಷಣದ ಕನಸನ್ನು ಕೈಬಿಡದೆ, ಪರಿಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಮುಂದೆ ಸಾಗಿದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು 1990ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಇಂದು ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ.

ಶಿಕ್ಷಕರಾಗಿ ಪಾಠ ಹೇಳುವುದರಲ್ಲೇ ಸೀಮಿತವಾಗದೆ, ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸುವ ಸಾಹಿತ್ಯವನ್ನು ರಚಿಸಿದ್ದಾರೆ. ‘ಬನದಮ್ಮ’, ‘ಕಾಗೆ ಬಳಗ’, ‘ಕರುಳಿನ ಗೆಳೆಯ’, ‘ಬಾಳ ಜ್ಯೋತಿ’, ‘ಕನಸಿನ ಬಾಲೆ’, ‘ವಿದೇಶಕ್ಕೆ ಹಾರಿದ ಹಕ್ಕಿ’ ಸೇರಿದಂತೆ ಹಲವು ಮಕ್ಕಳ ನಾಟಕಗಳು ರಾಜ್ಯದ ವಿವಿಧ ವೇದಿಕೆಗಳಲ್ಲಿ ಪ್ರದರ್ಶನಗೊಂಡಿವೆ.

ಅವರ ಐತಿಹಾಸಿಕ ನಾಟಕ ‘ಬಂಡೆದ್ದ ಮುಂಡರಗಿ ಭೀಮರಾಯ’ ಬಾನುಲಿಯಲ್ಲಿ ಪ್ರಸಾರಗೊಂಡು ಜನಮನ್ನಣೆ ಪಡೆದಿರುವುದಷ್ಟೇ ಅಲ್ಲ, ಶಾಲಾ ಪಠ್ಯದಲ್ಲೂ ಸ್ಥಾನ ಪಡೆದಿರುವುದು ಅವರ ಸಾಹಿತ್ಯದ ಶಕ್ತಿಗೆ ಸಾಕ್ಷಿಯಾಗಿದೆ.

ಕವನ, ನಾಟಕ, ಸಂಶೋಧನೆ, ಮಕ್ಕಳ ಸಾಹಿತ್ಯ, ಜನಪದ, ಸಂಗೀತ, ಬೀದಿ ನಾಟಕ, ಪರಿಸರ ಜಾಗೃತಿ, ಬಾಲ್ಯ ವಿವಾಹ ತಡೆ, ಸಾಕ್ಷರತೆ, ವಿಶೇಷ ಮಕ್ಕಳ ಶಿಕ್ಷಣ—ಹೀಗೆ ಸ್ಪರ್ಶಿಸದ ಕ್ಷೇತ್ರವೇ ಇಲ್ಲ ಎನ್ನುವಷ್ಟು ವ್ಯಾಪಕವಾಗಿ ಅವರು ಕೆಲಸ ಮಾಡಿದ್ದಾರೆ. ಮಕ್ಕಳಿಗಾಗಿ ಬರೆದ ಹಾಡುಗಳಿಗೆ ತಾವೇ ರಾಗ ಸಂಯೋಜಿಸಿ ಧ್ವನಿಮುದ್ರಿಕೆ ಬಿಡುಗಡೆ ಮಾಡಿರುವುದು ಅವರ ಬಹುಮುಖ ಪ್ರತಿಭೆಯ ಮತ್ತೊಂದು ಮುಖ.

ಶಾಲೆಯ ನಾಲ್ಕು ಗೋಡೆಗಳೊಳಗೆ ಶಿಕ್ಷಣವನ್ನು ಸೀಮಿತಗೊಳಿಸದೆ, ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ, ಸೃಜನಶೀಲತೆ ಮತ್ತು ಜೀವನ ಕೌಶಲ್ಯ ಬೆಳೆಸುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಶಿಕ್ಷಣ ಇಲಾಖೆಯ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಾಹಿತ್ಯ ರಚಿಸಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ಸಾಧನೆಗೆ ಕರ್ನಾಟಕ ಸರ್ಕಾರದ ರಾಷ್ಟ್ರಪ್ರಶಸ್ತಿ, ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ, ಉತ್ತಮ ಶಿಕ್ಷಕ ಸಾಹಿತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಮಕ್ಕಳ ರಂಗಭೂಮಿ ಕುರಿತ ಸಂಶೋಧನೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌.ಡಿ. ಪದವಿ ನೀಡಿ ಗೌರವಿಸಿದೆ.

ಈ ಬಾರಿ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅವರ ಹೊಸ ಕೃತಿ ‘ನಂಗೂ ಬೇಕು ನಿಂಗೂ ಸಾಂಗು’ ಲೋಕಾರ್ಪಣೆಗೊಳ್ಳುತ್ತಿದೆ. ಕೇವಲ 21 ಪದ್ಯಗಳನ್ನು ಒಳಗೊಂಡ ಈ ಕೃತಿ, ಮಕ್ಕಳ ಚಿಂತನೆ, ಸಂಸ್ಕಾರ, ಕನ್ನಡ, ಪರಿಸರ, ವಿಜ್ಞಾನ, ಯೋಗ, ದೇಶಪ್ರೇಮ ಮತ್ತು ಜೀವನ ಮೌಲ್ಯಗಳನ್ನು ಸರಳ ಹಾಗೂ ಪರಿಣಾಮಕಾರಿ ಭಾಷೆಯಲ್ಲಿ ಪರಿಚಯಿಸುತ್ತದೆ. ಮಕ್ಕಳ ಮನಸ್ಸನ್ನು ಅರಿತು ಬರೆಯಬಲ್ಲ ಲೇಖಕರಿಂದ ಮಾತ್ರ ಇಂತಹ ಕೃತಿ ಸಾಧ್ಯ.

ಈ ಸಮ್ಮೇಳನದ ಮತ್ತೊಂದು ವಿಶೇಷವೆಂದರೆ, ಇದು ಮಕ್ಕಳಿಂದ… ಮಕ್ಕಳಿಗಾಗಿ… ಮಕ್ಕಳಿಗೋಸ್ಕರ… ನಡೆಯುತ್ತಿರುವ ಅಪರೂಪದ ಸಾಹಿತ್ಯ ಸಮ್ಮೇಳನ. ಮಕ್ಕಳ ವಿಜ್ಞಾನ ಪ್ರದರ್ಶನ, ಚಿಂತನಾತ್ಮಕ ಹರಟೆ, ಶರಣ ಸಾಹಿತ್ಯ ಗೋಷ್ಠಿಗಳು, “ಬಾಲ ಶರಣ ಸಿರಿ” ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಸಮ್ಮೇಳನದ ಮೆರುಗನ್ನು ಹೆಚ್ಚಿಸಲಿವೆ.

ಡಾ. ನಿಂಗು ಸೊಲಗಿ ಅವರಂತಹ ಸೃಜನಶೀಲ ಶಿಕ್ಷಕರು ಸಮಾಜಕ್ಕೆ ಸಿಗುವುದು ಅಪರೂಪ. ಅವರ ಬದುಕು ಪ್ರತಿಯೊಬ್ಬ ಶಿಕ್ಷಕನಿಗೂ, ಪ್ರತಿಯೊಬ್ಬ ವಿದ್ಯಾರ್ಥಿಗೂ, ಪ್ರತಿಯೊಬ್ಬ ಸಾಹಿತಿಗೂ ಪ್ರೇರಣೆ. ಮಕ್ಕಳಲ್ಲಿ ಕನಸು ಬಿತ್ತುವ ಈ ಮಹಾನ್ ಶಿಕ್ಷಣ ಸಾಧಕನಿಗೆ ಸರ್ವಾಧ್ಯಕ್ಷ ಸ್ಥಾನ ದೊರೆತಿರುವುದು ನಿಜಕ್ಕೂ ಸಮ್ಮೇಳನದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.

ಡಾ. ನಿಂಗು ಸೊಲಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಾಹಿತ್ಯ ಮತ್ತು ಶಿಕ್ಷಣ ಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಸಮಸ್ತ ಶರಣ ಬಂಧುಗಳ ಆಶಯ.

Oplus_16908288

-ಶ್ರೀಮತಿ ಸುಧಾ ಹುಚ್ಚಣ್ಣವರ, ಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img