ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕು ಹಾಗೂ 10 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಬೇಕು ಎಂದು ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಮುಂಗಾರು ಮಳೆ ಕಳೆದುಕೊಂಡಿದ್ದು, ದನಕರುಗಳಿಗೆ ಕುಡಿಯುವ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರು ಕಂಗಾಲಾಗಿ ಗುಳೆ ಹೋಗುತ್ತಿದ್ದರೂ ಸರ್ಕಾರ ರೈತರ ಪರವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಬರ ಇರುವ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರೂ ಸರ್ಕಾರ ಯಾಕೆ ಅಧಿಕೃತವಾಗಿ ಬರ ಘೋಷಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಹಾಗೂ ಸಚಿವರೇ ಬರ ಪರಿಸ್ಥಿತಿ ಇರುವುದನ್ನು ಒಪ್ಪಿಕೊಳ್ಳುತ್ತಿದ್ದರೂ ಅಧಿಕೃತ ಘೋಷಣೆ ಮಾಡದಿರುವುದನ್ನು ಪ್ರಶ್ನಿಸಿದ ರವಿಕುಮಾರ್, ಕೂಡಲೇ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ರೈತರು ಮೂರು ಬಾರಿ ಬಿತ್ತನೆ ಮಾಡಿದ್ದು, ಗೊಬ್ಬರ, ಕೂಲಿ ಹಾಗೂ ಬಿತ್ತನೆ ವೆಚ್ಚದಿಂದ ನಷ್ಟ ಅನುಭವಿಸಿದ್ದಾರೆ ಎಂದು ವಿವರಿಸಿದರು.
ಎರಡೂವರೆ ತಿಂಗಳಿನಿಂದ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಎಕರೆಗೆ 50 ಸಾವಿರ ರೂ. ನೀಡಬೇಕು ಹಾಗೂ ರಾಜ್ಯದಾದ್ಯಂತ ಇರುವ ರೈತರಿಗಾಗಿ 10 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.



