ಬೆಂಗಳೂರು: ರಾಜ್ಯ ಸರ್ಕಾರಿ ಸಚಿವರನ್ನು ಗುರಿಯಾಗಿಸಿಕೊಂಡು ‘ಸ್ಟಿಂಗ್ ಆಪರೇಷನ್’ ಹಾಗೂ ಟ್ರ್ಯಾಪ್ ಮಾಡಲು ಯತ್ನಗಳು ನಡೆಯುತ್ತಿದ್ದು, ಸಚಿವರು ಅತ್ಯಂತ ಜಾಗರೂಕರಾಗಿರಬೇಕು ಎಂದು ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಸಚಿವರಿಗೆ ಈ ಕುರಿತು ಕಿವಿಮಾತು ಹೇಳಿರುವ ಅವರು, ಸಚಿವರ ಚಲನವಲನಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ಖಾಸಗಿ ತಂಡಗಳಿಂದ ಸ್ಟಿಂಗ್ ಆಪರೇಷನ್ಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಗುಪ್ತಚರ ಇಲಾಖೆಯಿಂದ ದೊರೆತ ಮಾಹಿತಿಯನ್ನಾಧರಿಸಿ ಡಿಕೆ ಶಿವಕುಮಾರ್ ಈ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಎರಡು ಪ್ರತ್ಯೇಕ ತಂಡಗಳು ಸಚಿವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದು, ಸಚಿವರು ಯಾವುದೇ ರೀತಿಯ ಬಲೆಗೆ ಬೀಳದಂತೆ ಹೆಜ್ಜೆ ಇಡಬೇಕು ಎಂದು ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ.
ಕ್ಯಾಬಿನೆಟ್ ಸಭೆಯಲ್ಲಿ ಎಲ್ಲರಿಗೂ ಒಟ್ಟಾರೆಯಾಗಿ ಎಚ್ಚರಿಕೆ ನೀಡಿದ ಬಳಿಕ, ಈ ಸ್ಟಿಂಗ್ಗೆ ಮುಖ್ಯವಾಗಿ ಟಾರ್ಗೆಟ್ ಆಗಿರುವ ಐವರು ಸಚಿವರ ಜೊತೆ ಡಿಕೆಶಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಅವರ ಜೊತೆ ಪ್ರತ್ಯೇಕವಾಗಿ ಮಾತನಾಡಿ ಬುದ್ಧಿಮಾತು ಹೇಳಿ, ಅಲರ್ಟ್ ಮೆಸೇಜ್ ರವಾನಿಸಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಿ ಎಚ್ಚರಿಸಿರುವ ಆ ಐವರು ಸಚಿವರು ಯಾರು ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.



