ಬಾಲಿವುಡ್‌ನ ಕ್ಯೂಟ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮನೆಯಲ್ಲಿ ಮತ್ತೆ ಕಂದನ ಕಲರವ ಕೇಳಿಬರಲಿದೆ. ಮಗಳು ಸರಾಯಾ ಆಗಮನದ ಖುಷಿಯಲ್ಲಿರುವ ಸ್ಟಾರ್ ಜೋಡಿ ಇದೀಗ ಮತ್ತೊಂದು ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಹೌದು, ‘ಟಾಕ್ಸಿಕ್’ ಬ್ಯೂಟಿ ಕಿಯಾರಾ ಅಡ್ವಾಣಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಕ್ಟೋಬರ್ 7ರಂದು ಕಿಯಾರಾ ಮತ್ತು ಸಿದ್ಧಾರ್ಥ್ ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಫೋಟೋವೊಂದನ್ನು ಹಂಚಿಕೊಂಡು ಈ ಗುಡ್‌ನ್ಯೂಸ್ ನೀಡಿದ್ದಾರೆ. ಪುಟ್ಟ ಮಗುವಿನ ಸಾಕ್ಸ್ ಹಿಡಿದಿರುವ ಫೋಟೋ ಶೇರ್ ಮಾಡಿರುವ ದಂಪತಿ, “ನಮಗೆ ಮತ್ತೊಮ್ಮೆ ಆಶೀರ್ವಾದ ಸಿಕ್ಕಿದೆ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ.
ಕಿಯಾರಾ-ಸಿದ್ಧಾರ್ಥ್ ಗುಡ್‌ನ್ಯೂಸ್ ಅನೌನ್ಸ್ ಮಾಡಿದ್ದೇ ತಡ, ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಲಕ್ಷಾಂತರ ಅಭಿಮಾನಿಗಳು ಸ್ಟಾರ್ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷವೆಂದರೆ, ಇತ್ತೀಚೆಗಷ್ಟೇ ‘ಬಿಗ್ ಬಾಸ್ 20’ ಕಾರ್ಯಕ್ರಮಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ ಭೇಟಿ ನೀಡಿದ್ದರು. ಈ ವೇಳೆ ತಂದೆಯಾದ ಅನುಭವದ ಬಗ್ಗೆ ಮಾತನಾಡಿದ್ದ ಸಿದ್ಧಾರ್ಥ್, ಪೇರೆಂಟ್‌ಹುಡ್ ತಮ್ಮ ಜೀವನದ ಅತ್ಯಂತ ಸುಂದರ ಅನುಭವಗಳಲ್ಲಿ ಒಂದು ಎಂಬಂತೆ ಖುಷಿ ಹಂಚಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಸಲ್ಮಾನ್ ಖಾನ್ ಮತ್ತೊಂದು ಮಗುವಿನ ವಿಚಾರವಾಗಿ ಸಿದ್ಧಾರ್ಥ್ ಅವರನ್ನು ತಮಾಷೆಯಾಗಿ ಕಾಲೆಳೆದಿದ್ದರು. ಇದೀಗ ಕೆಲವೇ ದಿನಗಳಲ್ಲಿ ಸ್ಟಾರ್ ಜೋಡಿಯಿಂದ ಎರಡನೇ ಮಗುವಿನ ಗುಡ್‌ನ್ಯೂಸ್ ಹೊರಬಿದ್ದಿದೆ.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ 2023ರ ಫೆಬ್ರವರಿಯಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2025ರ ಜುಲೈನಲ್ಲಿ ಇವರ ಜೀವನಕ್ಕೆ ಮಗಳು ಸರಾಯಾ ಎಂಟ್ರಿ ಕೊಟ್ಟಿದ್ದಳು. ಇದೀಗ ಸರಾಯಾಗೆ ಒಂದು ವರ್ಷ ತುಂಬಿದ ಕೆಲವೇ ತಿಂಗಳಲ್ಲಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ದಂಪತಿ ಪ್ರಕಟಿಸಿದ್ದಾರೆ.
ಒಂದೆಡೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಿಯಾರಾ, ಮತ್ತೊಂದೆಡೆ ಫ್ಯಾಮಿಲಿ ಲೈಫ್‌ನಲ್ಲೂ ಹೊಸ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಮಗಳು ಸರಾಯಾಗೆ ಪುಟ್ಟ ತಮ್ಮ ಅಥವಾ ತಂಗಿಯ ಆಗಮನವಾಗಲಿದ್ದು, ಕಿಯಾರಾ-ಸಿದ್ಧಾರ್ಥ್ ಮನೆಯಲ್ಲಿ ಈಗ ಡಬಲ್ ಖುಷಿ ಮನೆಮಾಡಿದೆ.



