HomeKarnataka Newsಹೆಂಡತಿ, ಮಗುವಿಗೆ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ: ಷೇರು ವ್ಯವಹಾರ ಮರೆಮಾಚಿದ್ದ ಪತಿಗೆ ಹೈಕೋರ್ಟ್ ಎಚ್ಚರಿಕೆ

ಹೆಂಡತಿ, ಮಗುವಿಗೆ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ: ಷೇರು ವ್ಯವಹಾರ ಮರೆಮಾಚಿದ್ದ ಪತಿಗೆ ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು: ಷೇರುಗಳ ಮಾರಾಟದಿಂದ ಬರುವ ಲಾಭವು ಪತಿಯ ಆದಾಯದ ಭಾಗವೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಇಂತಹ ಆದಾಯವನ್ನು ಮರೆಮಾಚಿ ಹೆಂಡತಿ ಮತ್ತು ಮಗುವಿಗೆ ನೀಡಬೇಕಾದ ಜೀವನಾಂಶದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮಹತ್ವದ ಆದೇಶ ನೀಡಿದೆ.

ಮಾಸಿಕ 50,000 ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಹಾಗೂ ಜೀವನಾಂಶ ಮೊತ್ತ ಹೆಚ್ಚಿಸಲು ಕೋರಿ ಪತ್ನಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿದ ಹೈಕೋರ್ಟ್, ಪತ್ನಿಗೆ ನೀಡಬೇಕಾದ ಜೀವನಾಂಶ ಮೊತ್ತವನ್ನು ಮಾಸಿಕ ₹50,000 ದಿಂದ ₹1,20,000 (1.20 ಲಕ್ಷ) ಕ್ಕೆ ಹೆಚ್ಚಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಷೇರು ವ್ಯವಹಾರದಿಂದ ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರದಿದ್ದರೂ, ವಾರ್ಷಿಕವಾಗಿ ಅದರಿಂದ ಬೃಹತ್ ಮೊತ್ತದ ಆದಾಯ ಲಭಿಸುತ್ತದೆ. ಹೀಗಾಗಿ ಅದನ್ನು ಆರ್ಥಿಕ ಸಾಮರ್ಥ್ಯದ ಲೆಕ್ಕಾಚಾರದಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಲ್ಲದೆ, ಸಾಲದ ಇಎಂಐ (EMI) ಪಾವತಿಸುವುದು ಆಸ್ತಿ ಸೃಷ್ಟಿಯ ಭಾಗವೇ ಹೊರತು, ಅದನ್ನು ಕಡ್ಡಾಯ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲು ನೆಪವಾಗಿ ಬಳಸಬಾರದು ಎಂದು ಪೀಠ ಖಡಕ್ ಆಗಿ ತಿಳಿಸಿದೆ. ಅರ್ಜಿದಾರ ಪತ್ನಿಯು ಪ್ರಸ್ತುತ ಉದ್ಯೋಗ ಕಳೆದುಕೊಂಡಿದ್ದು, ಕಣ್ಣಿನ ಸಮಸ್ಯೆ (ಗ್ಲಾಕೋಮಾ) ಹಾಗೂ ‘ಆಟೋಇಮ್ಯೂನ್’ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿರುವುದನ್ನು ಹೈಕೋರ್ಟ್ ಗಮನಿಸಿತು.

ಹೈಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು:

  1. ಜೀವನಾಂಶ ಹೆಚ್ಚಳ: ಪತ್ನಿಗೆ ಕೌಟುಂಬಿಕ ನ್ಯಾಯಾಲಯದ ಆದೇಶದ ದಿನಾಂಕದಿಂದ ಜಾರಿಗೆ ಬರುವಂತೆ ಮಾಸಿಕ ₹1.20 ಲಕ್ಷ ಜೀವನಾಂಶ ನೀಡಬೇಕು.
  2. ಹಿಂದಿನ ಅವಧಿಯ ಲೆಕ್ಕಾಚಾರ: ಅರ್ಜಿ ಸಲ್ಲಿಸಿದ ದಿನಾಂಕದಿಂದ ಪತ್ನಿ ಕೆಲಸದಲ್ಲಿದ್ದ ಅವಧಿಯವರೆಗೆ ಮಾಸಿಕ ₹30,000 ಹಾಗೂ ಕೆಲಸ ಕಳೆದುಕೊಂಡ ನಂತರದ ದಿನದಿಂದ ಮಾಸಿಕ ₹1.20 ಲಕ್ಷ ಜೀವನಾಂಶವನ್ನು ಲೆಕ್ಕ ಹಾಕಿ ಪಾವತಿಸಬೇಕು.
  3. ಮಗುವಿನ ಶಿಕ್ಷಣ ವೆಚ್ಚ: ಮಗುವಿನ ಶಿಕ್ಷಣ ಹಾಗೂ ಶಾಲಾ ವೆಚ್ಚಗಳನ್ನು ಪತಿಯೇ ಸಂಪೂರ್ಣವಾಗಿ ಭರಿಸಬೇಕು.
  4. 4 ವಾರಗಳ ಗಡುವು: ಎಲ್ಲಾ ಬಾಕಿ ಮೊತ್ತವನ್ನು ಆದೇಶ ಬಂದ 4 ವಾರಗಳ ಒಳಗೆ ಪತ್ನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಜೆ.ಪಿ. ನಗರ ನಿವಾಸಿ ಹಾಗೂ ಸಿಸ್ಕೋ ಸಂಸ್ಥೆಯ ಉದ್ಯೋಗಿಯಾಗಿರುವ ಪತಿ ಮತ್ತು ಅವರ ಪತ್ನಿ ನಡುವೆ ವಿಚ್ಛೇದನ ಅರ್ಜಿ ವಿಚಾರಣಾ ಹಂತದಲ್ಲಿದೆ. ವಿಚಾರಣೆ ವೇಳೆ ಪತಿಯ ಪರ ವಕೀಲರು, “ಮೂಲ ವೇತನ ₹2.91 ಲಕ್ಷವಿದ್ದು, ಸಾಲದ ಇಎಂಐ ಹಾಗೂ ಪೋಷಕರ ವೆಚ್ಚ ಕಳೆದು ಕೇವಲ ₹50,000 ಉಳಿಯುತ್ತದೆ. ಷೇರು ಲಾಭವು ಶಾಸನಬದ್ಧ ನಿಯಮಿತ ವೇತನವಲ್ಲ” ಎಂದು ವಾದಿಸಿದ್ದರು.

ಆದರೆ ಪತ್ನಿ ಪರ ವಕೀಲರು ಆಕ್ಷೇಪಿಸಿ, ಪತಿಯ ವಾರ್ಷಿಕ ಆದಾಯ ₹91 ಲಕ್ಷಕ್ಕೂ ಹೆಚ್ಚಿದ್ದು, ಕಂಪನಿಯ ಸ್ಟಾಕ್ ಆಪ್ಷನ್ ಮಾರಾಟದಿಂದಲೇ ವಾರ್ಷಿಕ ₹20 ರಿಂದ ₹28 ಲಕ್ಷ ಲಾಭ ಗಳಿಸುತ್ತಿದ್ದಾರೆ. ಅವರ ಒಟ್ಟು ಮಾಸಿಕ ಆದಾಯ ₹5 ಲಕ್ಷಕ್ಕೂ ಅಧಿಕವಾಗಿದೆ ಎಂಬ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ ಹೈಕೋರ್ಟ್ ಜೀವನಾಂಶವನ್ನು ₹1.20 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img