ಬೆಂಗಳೂರು: ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬಸ್ ಟಿಕೆಟ್ ದರ (Bus Ticket Price) ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ರಚಿಸಲಾಗಿದ್ದ ತಜ್ಞರ ಸಮಿತಿಯು ಇಂದು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ.
ಬಸ್ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಅತಯಲ್ ತಿವಾರಿ ಅವರ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. ಕಳೆದ 2 ತಿಂಗಳುಗಳಿಂದ ಅಧ್ಯಯನ ನಡೆಸಿದ ಸಮಿತಿಯು, ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ ಹಾಗೂ ಟಿಕೆಟ್ ಹೆಚ್ಚಳದ ಕುರಿತ ಸಂಪೂರ್ಣ ವರದಿಯನ್ನು ಇಂದು ಸರ್ಕಾರಕ್ಕೆ ಹಸ್ತಾಂತರಿಸಲಿದೆ.
ಇತ್ತೀಚೆಗೆ ಈ ಕುರಿತು ಮಾತನಾಡಿದ್ದ ಸಾರಿಗೆ ಸಚಿವ ಬೈರತಿ ಸುರೇಶ್, “ಸಾರಿಗೆ ನಿಗಮಗಳ ಉಳಿವಿಗಾಗಿ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಸುಳಿವು ನೀಡಿದ್ದರು. ಸಾರಿಗೆ ನಿಗಮಗಳು ಶೇ. 40 ರಷ್ಟು ಟಿಕೆಟ್ ದರ ಏರಿಕೆಗೆ ಬೇಡಿಕೆ ಇಟ್ಟಿವೆಯಾದರೂ, ಪ್ರಯಾಣಿಕರ ಹಿತದೃಷ್ಟಿಯಿಂದ ಶೇ. 12 ಕ್ಕಿಂತ ಹೆಚ್ಚು ದರ ಏರಿಕೆಯಾಗುವ ಸಾಧ್ಯತೆಯಿದೆ.
ವಿಶೇಷವಾಗಿ ಬಿಎಂಟಿಸಿ (BMTC) ನಿಗಮದ ಟಿಕೆಟ್ ದರ ಶೇ. 15 ರಿಂದ 17 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದ್ದು, ಇತರ ನಿಗಮಗಳಿಗಿಂತ ಬಿಎಂಟಿಸಿ ದರ ಕೊಂಚ ಹೆಚ್ಚಿರಲಿದೆ. ಕಳೆದ 2025ರ ಜನವರಿಯಲ್ಲಿ ಸಾರಿಗೆ ಇಲಾಖೆಯು ಟಿಕೆಟ್ ದರವನ್ನು ಶೇ. 15 ರಷ್ಟು ಏರಿಕೆ ಮಾಡಿತ್ತು. ಅಂದು ಸಾಮಾನ್ಯ ಬಸ್ಗಳ ಟಿಕೆಟ್ ದರವನ್ನು ಪ್ರತಿ ಸ್ಟೇಜ್ಗೆ 6 ರೂಪಾಯಿಯಂತೆ ಹೆಚ್ಚಿಸಲಾಗಿತ್ತು. ಇದೀಗ ತಜ್ಞರ ಸಮಿತಿಯ ವರದಿ ಸಲ್ಲಿಕೆಯಾಗುತ್ತಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಯ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.



