ಚಿತ್ರದುರ್ಗ: ಬರಪೀಡಿತ ಹಿರಿಯೂರು ಕ್ಷೇತ್ರದ ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ. ಜನರ ಕಷ್ಟಗಳನ್ನು ಕೇಳಿ ಪರಿಹಾರ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬರದ ನಾಡಿಗೆ ನೀರು ಹರಿಸುವ ಕೆಲಸ ಮಾಡಿದ್ದರೆ ಅವರ ಮುಂದೆ ಶರಣಾಗುತ್ತಿದ್ದೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿರಿಯೂರಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರ ವಿರುದ್ಧವೂ ಟೀಕೆ ಮಾಡಿದರು. “ಗೋವಿಂದ ಕಾರಜೋಳ ಅವರು ಖಾಲಿ ಡಬ್ಬದಂತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಏನನ್ನೂ ಮಾತನಾಡಿಲ್ಲ, ಅನುದಾನವನ್ನೂ ತಂದಿಲ್ಲ. ನಾನು ಅಭಿವೃದ್ಧಿ ಮಾಡಿಲ್ಲ ಎಂದಾದರೆ ಜನರು ನನ್ನನ್ನು ಪ್ರಶ್ನಿಸಲಿ” ಎಂದು ಸವಾಲು ಹಾಕಿದರು.
ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ
ಬಿಜೆಪಿ ನಾಯಕರ ವಿಚಾರ ನಮಗೆ ಬೇಡ ಎಂದು ಹೇಳಿದ ಡಿಕೆಶಿ, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಮಗ ಹಾಗೂ ಬಸವರಾಜ ಬೊಮ್ಮಾಯಿ ಅವರ ಮಗ ಗೆದ್ದಿದ್ದಾರೆಯೇ ಎಂದು ಪ್ರಶ್ನಿಸಿದರು. ರಾಜಕಾರಣದಲ್ಲಿ ಜನರ ವಿಶ್ವಾಸವೇ ಮುಖ್ಯವಾಗಿದ್ದು, ಮರಕ್ಕೆ ಬೇರು ಎಷ್ಟು ಮುಖ್ಯವೋ ರಾಜಕಾರಣಕ್ಕೆ ಜನರ ನಂಬಿಕೆ ಅಷ್ಟೇ ಮುಖ್ಯ ಎಂದರು.
ಹಿರಿಯೂರಿನ ಜನರಿಗೆ ಕಾಂಗ್ರೆಸ್ ಮೇಲೆ ಅಪಾರ ನಂಬಿಕೆ ಇದೆ ಎಂದು ಹೇಳಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಪ್ರಸ್ತಾಪಿಸಿದರು. ಉಚಿತ ವಿದ್ಯುತ್ ಸಿಗುತ್ತಿದೆಯೇ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬರುತ್ತಿದೆಯೇ ಹಾಗೂ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ತಲುಪುತ್ತಿದೆಯೇ ಎಂದು ಜನರನ್ನು ಪ್ರಶ್ನಿಸಿದರು.
“ನಮ್ಮ ಮತ್ತು ನಿಮ್ಮ ಸಂಬಂಧ ದೇವರು ಹಾಗೂ ಭಕ್ತರ ನಡುವಿನ ಸಂಬಂಧದಂತಿದೆ. ಅಮ್ಮನ ಮೂಲ ಪ್ರೀತಿ, ದೇವರ ನೆನಪಿನ ಮೂಲ ಭಕ್ತಿ. ಜನರ ನಂಬಿಕೆಗಿಂತ ದೊಡ್ಡದು ಯಾವುದೂ ಇಲ್ಲ” ಎಂದು ಹೇಳಿದರು.
ಭದ್ರಾ ನೀರು ಹರಿಸಿದ್ದು ನಾನೇ: ಡಿಕೆಶಿ
ಹಿರಿಯೂರು ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರು ಕೇಂದ್ರದಿಂದ 5,300 ಕೋಟಿ ರೂಪಾಯಿ ಅನುದಾನ ತರಲು ಪ್ರಯತ್ನಿಸಬೇಕು ಹಾಗೂ ಜೆಡಿಎಸ್ ನಾಯಕರು ಕಾಡುಗೊಲ್ಲ ಸಮುದಾಯಕ್ಕೆ ಪ್ರಮಾಣಪತ್ರ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
“ಭದ್ರಾ ನೀರು ಹರಿಸಿದ್ದು ನಾನೇ ಎನ್ನುವುದಕ್ಕೆ ನಿಮ್ಮ ಕಣ್ಣೇ ಸಾಕ್ಷಿ. ಸಣ್ಣ ನೀರಾವರಿ ಇಲಾಖೆಯಿಂದ 244 ಕೋಟಿ ರೂಪಾಯಿ ವೆಚ್ಚ ಮಾಡಿ ಕೆರೆಗಳನ್ನು ತುಂಬಿಸಿದ್ದೇವೆ” ಎಂದು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದರು.
ಗ್ಯಾರಂಟಿ ಯೋಜನೆಗಳ ಹಣ ತಲುಪಲು ಖಾತೆ ಪರಿಶೀಲನೆ ಅಗತ್ಯ
ಅಧಿಕಾರಕ್ಕೆ ಬಂದ ದಿನವೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದ ಡಿಕೆಶಿ, ಕೆಲ ಫಲಾನುಭವಿಗಳ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುವ ಕಾರಣ ಯೋಜನೆಯ ಹಣ ತಲುಪುವಲ್ಲಿ ಸಮಸ್ಯೆಯಾಗುತ್ತಿದೆ ಎಂದರು.
ಫಲಾನುಭವಿಗಳು ಸರಿಯಾದ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ಪರಿಶೀಲನೆ ನಡೆಸಿ ಅರ್ಹರಿಗೆ ಯೋಜನೆಗಳ ಸೌಲಭ್ಯ ತಲುಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು.
ರೈತರಿಗಾಗಿ ನೇಗಿಲ ಯೋಗಿ ಯೋಜನೆ ಜಾರಿಗೊಳಿಸಿದ್ದು, ಸರ್ಕಾರದಿಂದ ತೇಗದ ಸಸಿಗಳನ್ನು ನೀಡಲಾಗುತ್ತಿದೆ. ರೈತರು ಸಸಿಗಳನ್ನು ಮಕ್ಕಳಂತೆ ಜೋಪಾನವಾಗಿ ಬೆಳೆಸಿದರೆ ಮುಂದಿನ ವರ್ಷಗಳಲ್ಲಿ ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ತಮ್ಮ ನಾಯಕತ್ವಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ ಡಿಕೆಶಿ, ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಅಭಿಪ್ರಾಯಪಟ್ಟರು.
ನಿವೇಶನ ರಹಿತರಿಗೆ 30×40 ನಿವೇಶನ ನೀಡಲು ಆದೇಶ
ನಿವೇಶನ ರಹಿತರಿಗೆ 30×40 ಅಳತೆಯ ನಿವೇಶನ ನೀಡಲು ಆದೇಶಿಸಲಾಗಿದೆ. ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ಜಂಟಿ ಖಾತೆ ಮಾಡಿಕೊಡುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಜನರು ಸರ್ಕಾರದ ವಿಶೇಷ ಯೋಜನೆಗಳ ಫಲಾನುಭವಿಗಳಾಗುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, “ಅದೃಷ್ಟಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಬಂದಿದ್ದೇನೆ. ಡಿ.ಕೆ. ಶಿವಕುಮಾರ್ ಮಾಡಿದ ಕೆಲಸಕ್ಕೆ ಜನರು ಕೂಲಿ ನೀಡಬೇಕು” ಎಂದು ಹೇಳಿದರು.
ಬರದ ನಾಡಿಗೆ ನೀರು ಕೊಡುವ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡಿದ್ದರೆ ಅವರ ಮುಂದೆ ಶರಣಾಗುತ್ತಿದ್ದೆ ಎಂದು ಪುನರುಚ್ಚರಿಸಿದ ಡಿಕೆಶಿ, ಹಿರಿಯೂರಿನ ಜನರು ತಮ್ಮ ಊರಿಗೆ ಬರದಂತೆ ಬಹಿಷ್ಕಾರ ಹಾಕುವ ಪರಿಸ್ಥಿತಿ ಬರಬಾರದು ಎಂದು ವಿಪಕ್ಷ ನಾಯಕರ ವಿರುದ್ಧ ಟೀಕಿಸಿದರು.









