ನವದೆಹಲಿ: ಲಂಚ ಪ್ರಕರಣದಲ್ಲಿ ಬಂಧಿತ ಹರಿಯಾಣದ ಪಂಚಕುಲದಲ್ಲಿರುವ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ಸೂಪರಿಂಟೆಂಡೆಂಟ್ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ (CBI) ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಸಂಪತ್ತು ಪತ್ತೆಯಾಗಿದೆ. ಸುಮಾರು 1.86 ಕೋಟಿ ರೂ. ಮೌಲ್ಯದ ನಗದು, ವಿದೇಶಿ ಕರೆನ್ಸಿ, ಚಿನ್ನಾಭರಣ ಹಾಗೂ ಬೆಳ್ಳಿಯನ್ನು ಸಿಬಿಐ ವಶಪಡಿಸಿಕೊಂಡಿದೆ.
ಖಾಸಗಿ ಕಂಪನಿಯೊಂದರ ಜಿಎಸ್ಟಿ (GST) ಸಂಬಂಧಿತ ಪ್ರಕ್ರಿಯೆಗಳಲ್ಲಿ ಸಹಾಯ ಮಾಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿತ್ತು. ಪಂಚಕುಲದಲ್ಲಿ ದೂರುದಾರರಿಂದ 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಯನ್ನು ಸಿಬಿಐ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದರು.
ಬಂಧನದ ಬಳಿಕ ನವೆಂಬರ್ 20ರಂದು ಅಧಿಕಾರಿಯ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಿಬಿಐ, 24.2 ಲಕ್ಷ ರೂ. ಭಾರತೀಯ ಕರೆನ್ಸಿ, ಸುಮಾರು 15.6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ 1.4 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಚಿನ್ನದ ಗಟ್ಟಿಗಳು ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದೆ. ಈ ಎಲ್ಲ ಸಂಪತ್ತಿನ ಒಟ್ಟು ಮೌಲ್ಯ ಸುಮಾರು 1.86 ಕೋಟಿ ರೂ. ಎಂದು ಸಿಬಿಐ ಅಂದಾಜಿಸಿದೆ.
ಇದಲ್ಲದೆ, ಅಧಿಕಾರಿಯ ಆರು ಬ್ಯಾಂಕ್ ಖಾತೆಗಳು, ಹೂಡಿಕೆಗಳು, ಜೀವ ವಿಮಾ ಪಾಲಿಸಿಗಳು ಹಾಗೂ ಹಲವು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ತನಿಖಾ ಸಂಸ್ಥೆ ಪತ್ತೆಹಚ್ಚಿದೆ. ಆರೋಪಿ ಮತ್ತು ಅವರ ಕುಟುಂಬ ಸದಸ್ಯರ ವಾಹನಗಳು ಹಾಗೂ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ಸಹ ಶೋಧ ಕಾರ್ಯಾಚರಣೆಯಲ್ಲಿ ದೊರೆತಿವೆ.
ಆರೋಪಿ ಮತ್ತು ಕುಟುಂಬ ಸದಸ್ಯರ ಆಸ್ತಿ ಹಾಗೂ ಹಣಕಾಸಿನ ವ್ಯವಹಾರಗಳ ಮೂಲವನ್ನು ಪರಿಶೀಲಿಸಲು ಸಿಬಿಐ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.










