ಪಾಟ್ನಾ: ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ 9.76 ಕಿ.ಮೀ ಉದ್ದದ ಆರು ಪಥಗಳ ಬೃಹತ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು. ವೈಶಾಲಿ ಜಿಲ್ಲೆಯ ಬಿದೂಪುರವನ್ನು ಪಾಟ್ನಾದ ಹೊರವಲಯದಲ್ಲಿರುವ ಕಚ್ಚಿ ದರ್ಗಾದೊಂದಿಗೆ ಸಂಪರ್ಕಿಸುವ ಈ ಸೇತುವೆಗೆ ‘ನಿತೀಶ್ ಸೇತು’ ಎಂದು ಹೆಸರಿಡಲಾಗಿದೆ.
ಸುಮಾರು 4,280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೆಸರನ್ನು ಹೊಂದಿದೆ. ಅವರ ಆಡಳಿತಾವಧಿಯಲ್ಲಿ ಈ ಯೋಜನೆ ರೂಪುಗೊಂಡು, ಇದೀಗ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ.
ಸೇತುವೆ ಉದ್ಘಾಟನೆಗಾಗಿ ಪಾಟ್ನಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಆತ್ಮೀಯವಾಗಿ ಅಪ್ಪುಗೆ ವಿನಿಮಯ ಮಾಡಿಕೊಂಡರು.
ಬಿಹಾರದಲ್ಲಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ಮೇ ತಿಂಗಳಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಅದರ ಬಳಿಕ ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ
‘ನಿತೀಶ್ ಸೇತು’ ಉದ್ಘಾಟನೆಯಿಂದ ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ರಸ್ತೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ಈಗಾಗಲೇ ವಾಹನ ದಟ್ಟಣೆಯಿಂದ ಸಮಸ್ಯೆ ಎದುರಿಸುತ್ತಿರುವ ಮಹಾತ್ಮ ಗಾಂಧಿ ಸೇತು ಮತ್ತು ಜೆ.ಪಿ. ಸೇತುವೆಗಳ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.
ಇದರ ಜೊತೆಗೆ ಕೃಷಿ ಉತ್ಪನ್ನಗಳು ಮತ್ತು ಕೈಗಾರಿಕಾ ಸರಕುಗಳ ಸಾಗಣೆ ಸುಲಭವಾಗಲಿದ್ದು, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಇದೇ ವೇಳೆ, ಬಿಹಾರದಲ್ಲಿ ಒಟ್ಟು 34,470 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಹಲವು ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ. ಅಲ್ಲದೆ, 100 ವಿದ್ಯುತ್ ಚಾಲಿತ ಬಸ್ಗಳ ಸೇವೆಗೂ ಚಾಲನೆ ನೀಡಿದ್ದಾರೆ.









