ವಿಜಯಸಾಕ್ಷಿ ಸುದ್ದಿ, ಗದಗ
ಪಶ್ಚಿಮ ಪದವೀಧರ ಮತಕ್ಷೇತ್ರದ ಪದವೀಧರರು ಹಾಗೂ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ನಿರಂತರ ನಿಕಟ ಸಂಪರ್ಕ ಹೊಂದಿರುವುದು, ವಿಧಾನ ಪರಿಷತ್ ಸದಸ್ಯರಾಗಿ ಎರಡು ಅವಧಿಯಲ್ಲಿ ಪದವೀಧರರು ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿರುವುದು ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಹ್ಯಾಟ್ರಿಕ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳ ಕುರಿತು ವಿಧಾನ ಪರಿಷತ್‌ನಲ್ಲಿ ಅವಕಾಶ ದೊರೆತಾಗಲೆಲ್ಲ ಸಮರ್ಪಕವಾಗಿ ವಿಷಯ ಮಂಡಿಸುವ ಮೂಲಕ ತಮ್ಮನ್ನು ಆಯ್ಕೆ ಮಾಡಿದ ಪದವೀಧರ ಮತದಾರರ ಹಿತ ಕಾಪಾಡುವಲ್ಲಿ ಸಂಕನೂರ ಅವರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರ ಈ ಕಾರ್ಯವೇ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ ಎಂದು ಹೇಳಿದ್ದಾರೆ.
ಸಂಕನೂರ ಅವರಿಗೆ ಮತದಾರರೊಂದಿಗೆ ಉತ್ತಮ ಸಂಪರ್ಕವಿದ್ದು, ಕಳೆದ ಎರಡು ಅವಧಿಯಲ್ಲಿನ ಕಾರ್ಯವೈಖರಿ ಹಾಗೂ ಪದವೀಧರರು ಮತ್ತು ಶಿಕ್ಷಕರ ಪರವಾಗಿ ಧ್ವನಿ ಎತ್ತಿರುವುದನ್ನು ಮತದಾರರು ಪರಿಗಣಿಸಲಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲೂ ಮತದಾರರ ಆಶೀರ್ವಾದದಿಂದ ಸಂಕನೂರ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ ಎಂದು ಅನಿಲ ಮೆಣಸಿನಕಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



