HomeKarnataka Newsಪತ್ನಿಯನ್ನು ಮನೆಗೆಲಸಕ್ಕೆ, ಪೋಷಕರ ಸೇವೆಗೆ ಬಲವಂತ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್

ಪತ್ನಿಯನ್ನು ಮನೆಗೆಲಸಕ್ಕೆ, ಪೋಷಕರ ಸೇವೆಗೆ ಬಲವಂತ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಪತ್ನಿಯನ್ನು ಕೇವಲ ಮನೆಗೆಲಸ ಮಾಡುವಂತೆ ಅಥವಾ ಪತಿಯ ಪೋಷಕರನ್ನು ನೋಡಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ವಿವಾಹವು ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯ, ಇಚ್ಛೆ ಹಾಗೂ ಹಕ್ಕುಗಳನ್ನು ನಿಯಂತ್ರಿಸುವ ಪರವಾನಗಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪತ್ನಿ ಹಾಗೂ ಮಗಳಿಗೆ ಮಾಸಿಕ ₹9 ಸಾವಿರ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಾಕೂರ್‌ ಸುಮಲತಾ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಪತ್ನಿಯಾದವಳು ಕೇವಲ ಮನೆಗೆಲಸ ಮಾಡುತ್ತಲೇ ಇರಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ವೃದ್ಧ ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಜವಾಬ್ದಾರಿ ಅವರ ಮಗ ಅಥವಾ ಮಗಳಿಗೆ ಸೇರಿದ್ದೇ ಹೊರತು, ಅಳಿಯ ಅಥವಾ ಸೊಸೆಯ ಮೇಲಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಹಿಳೆಯೊಬ್ಬಳು ತನ್ನ ತವರು ಮನೆಗೆ ತೆರಳಲು ಗಂಡನ ಮನೆಯಲ್ಲಿರುವ ಪ್ರತಿಯೊಬ್ಬರ ಅನುಮತಿ ಪಡೆಯಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಿವಾಹವು ಮತ್ತೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಇಚ್ಛೆಯನ್ನು ನಿಯಂತ್ರಿಸಲು, ಆಜ್ಞಾಪಿಸಲು ಅಥವಾ ಪ್ರಾಬಲ್ಯ ಸಾಧಿಸಲು ನೀಡುವ ಪರವಾನಗಿ ಅಲ್ಲ ಎಂದು ನ್ಯಾಯಾಲಯ ಖಡಕ್‌ ಆಗಿ ಹೇಳಿದೆ.

ಮಹಿಳೆಗೆ ತನ್ನ ಇಚ್ಛೆಯಂತೆ ತವರು ಮನೆಗೆ ಭೇಟಿ ನೀಡುವ ಹಕ್ಕಿದೆ. ಅದಕ್ಕಾಗಿ ಗಂಡನ ಮನೆಯ ಪ್ರತಿಯೊಬ್ಬರ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮಹಿಳೆಗೆ ತನ್ನ ವೃತ್ತಿಜೀವನ ಹಾಗೂ ಆರ್ಥಿಕತೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕಿದೆ. ಪತ್ನಿಯು ತನ್ನ ಇಚ್ಛೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಮಾತ್ರ ಬದುಕಬೇಕು ಎಂದು ಪತಿ ಒತ್ತಾಯಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪತ್ನಿಯ ನಿಷ್ಠೆಯನ್ನು ಕೇವಲ ಆಕೆ ಎಷ್ಟು ವಿಧೇಯಳಾಗಿದ್ದಾಳೆ ಎಂಬ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ ಎಂದೂ ಪೀಠ ಅಭಿಪ್ರಾಯಪಟ್ಟಿದೆ.

ಕೂಲಿ ಕೆಲಸ ಮಾಡುತ್ತಿದ್ದ ಪತಿ ವಿಚಾರಣೆ ವೇಳೆ, ಪತ್ನಿ ತನ್ನ ಪೋಷಕರನ್ನು ನೋಡಿಕೊಳ್ಳುತ್ತಿರಲಿಲ್ಲ, ಸರಿಯಾಗಿ ಮನೆಗೆಲಸ ಮಾಡುತ್ತಿರಲಿಲ್ಲ ಹಾಗೂ ತನ್ನ ಅನುಮತಿ ಪಡೆಯದೆ ಹಲವು ಬಾರಿ ತವರು ಮನೆಗೆ ಹೋಗಿದ್ದಳು ಎಂದು ಆರೋಪಿಸಿದ್ದ.

ಇದಕ್ಕೆ ಪ್ರತಿಯಾಗಿ ಪತ್ನಿ, ಪತಿಯ ಜೂಜು ಹಾಗೂ ಮದ್ಯಪಾನದ ಚಟದ ಜೊತೆಗೆ ಆತನ ಕುಟುಂಬಸ್ಥರಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದ್ದಾಗಿ ತಿಳಿಸಿದ್ದಳು.

ಪತಿಯ ವಾದವನ್ನು ತಳ್ಳಿಹಾಕಿದ ಹೈಕೋರ್ಟ್‌, ಆತನ ನಡವಳಿಕೆಯು ಮಾಲೀಕ ಮತ್ತು ನೌಕರನ ನಡುವಿನ ಸಂಬಂಧದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಅಂತಿಮವಾಗಿ, ಪತ್ನಿ ಹಾಗೂ ಮಗಳಿಗೆ ಮಾಸಿಕ ₹9 ಸಾವಿರ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img