ಮಂಡ್ಯ: ಲೋಕಾಯುಕ್ತ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅಧಿಕಾರಿಗೆ ಆಸ್ಪತ್ರೆಯಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ್ ನೇತೃತ್ವದ ತಂಡ ನಡೆಸಿದ ದಿಢೀರ್ ತಪಾಸಣೆಯಲ್ಲಿ ಜೈಲಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಯ ಕಾರ್ಯವೈಖರಿ ಪ್ರಶ್ನಾರ್ಹವಾಗಿರುವುದು ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣದ ಎಡಿಎಲ್‌ಆರ್ ಮಹಮದ್ ಹುಸೇನ್ ಅಕ್ರಮ ಖಾತೆ ಸೃಷ್ಟಿ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದರು. ನಿಯಮದಂತೆ ಜೈಲಿನಲ್ಲಿರಬೇಕಿದ್ದ ಅವರನ್ನು ಅನಾರೋಗ್ಯದ ಕಾರಣ ನೀಡಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಸಾಮಾನ್ಯ ವಾರ್ಡ್ ಬದಲಿಗೆ ಆಸ್ಪತ್ರೆಯ ಸ್ಪೆಷಲ್ ರೂಮ್‌ನಲ್ಲಿ ಇರಿಸಲಾಗಿದ್ದು, ಆರೋಪಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ತಂಡ ಪರಿಶೀಲನೆ ನಡೆಸಿದೆ.
ಪರಿಶೀಲನೆ ವೇಳೆ ವೈದ್ಯಾಧಿಕಾರಿಯನ್ನು ವಿಚಾರಿಸಿದಾಗ, ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟು ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂಬ ಮಾಹಿತಿ ದೊರೆತಿದೆ ಎನ್ನಲಾಗಿದೆ.
ಇದಕ್ಕಿಂತ ಗಂಭೀರವಾಗಿ, ಸ್ಪೆಷಲ್ ರೂಮ್‌ನಲ್ಲಿದ್ದ ಮಹಮದ್ ಹುಸೇನ್ ಜೊತೆ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಆಕೆ ತನ್ನನ್ನು ಆರೋಪಿಯ ಗೆಳತಿ ಎಂದು ಪರಿಚಯಿಸಿಕೊಂಡಿದ್ದಾಳೆ ಎನ್ನಲಾಗಿದೆ.
ನ್ಯಾಯಾಲಯದ ಅನುಮತಿ ಪಡೆಯದೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದೇಕೆ ಎಂದು ನ್ಯಾಯಾಧೀಶರು ಜೈಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಜೈಲಿನ ವೈದ್ಯರ ಸಲಹೆಯ ಮೇರೆಗೆ ದಾಖಲಿಸಲಾಗಿದ್ದು, ನಂತರ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಅಧಿಕಾರಿಗಳು ಉತ್ತರಿಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ಜೈಲಾಧಿಕಾರಿಗಳು ಹಾಗೂ ಮಿಮ್ಸ್ ವೈದ್ಯಾಧಿಕಾರಿಗಳ ನಡೆ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ನಿಯಮ ಉಲ್ಲಂಘನೆ ಅಥವಾ ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಲೋಕಾಯುಕ್ತ ಪ್ರಕರಣದಲ್ಲಿ ಬಂಧನಕ್ಕೊಳಗಾದ ಅಧಿಕಾರಿಗೆ ಜೈಲಿನ ಬದಲು ಆಸ್ಪತ್ರೆಯ ಸ್ಪೆಷಲ್ ರೂಮ್‌ನಲ್ಲಿ ಸಿಕ್ಕಿದ್ದ ಈ ‘ವಿಶೇಷ ಸೌಲಭ್ಯ’ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ.



