ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹಂದಿಜ್ವರ (H1N1) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಆಗಸ್ಟ್ 1ರಿಂದ ಈವರೆಗೆ ರಾಜ್ಯದಲ್ಲಿ 49 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ಮೃತಪಟ್ಟ ಐವರೂ ಈಗಾಗಲೇ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 31ರಿಂದ 49ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 34 ಮಂದಿ ಡೆಹ್ರಾಡೂನ್‌ನವರೇ ಆಗಿದ್ದಾರೆ. ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿದ್ದು, ಎಲ್ಲ ಜಿಲ್ಲೆಗಳಲ್ಲೂ ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಲಾಗಿದೆ.
ವೈದ್ಯರು ಹಾಗೂ ತಜ್ಞರು ಸೇರಿದಂತೆ ನಾಲ್ವರು ಸಿಬ್ಬಂದಿಯ ತಂಡಗಳು ಸೋಂಕು ಬಾಧಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿವೆ. ಸೋಂಕಿತರ ಕಳೆದ 10ರಿಂದ 15 ದಿನಗಳ ಪ್ರಯಾಣದ ವಿವರ ಹಾಗೂ ಅವರ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನೂ ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರಿಗೂ H1N1 ಪರೀಕ್ಷೆ ನಡೆಸಲಾಗುತ್ತಿದೆ.
ಮಧುಮೇಹ, ರಕ್ತದೊತ್ತಡ, ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಸಹ-ಅಸ್ವಸ್ಥತೆ ಹೊಂದಿರುವವರಲ್ಲಿ ಸೋಂಕು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಮೃತಪಟ್ಟ ಐವರೂ ಇಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಇಲಾಖೆ ತಿಳಿಸಿದೆ.
ಸೋಂಕಿತರ ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಅಗತ್ಯವಿದ್ದಲ್ಲಿ ಪ್ರತ್ಯೇಕವಾಗಿರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಉಸಿರಾಟದ ತೊಂದರೆ, ದಿಢೀರ್ ಜ್ವರ, ಚಳಿ, ಕೆಮ್ಮು, ಮೂಗು ಸೋರುವಿಕೆ, ಸ್ನಾಯು ನೋವು, ವಾಂತಿ ಅಥವಾ ತೀವ್ರ ಆಯಾಸ ಕಂಡುಬಂದರೆ ತಡ ಮಾಡದೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಆಸ್ಪತ್ರೆಗಳಿಗೆ ಈಗಾಗಲೇ H1N1 ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.



