ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ವೇಳೆ ರೋಗಿ ಮೃತಪಟ್ಟರೆ, ಬಾಕಿ ಬಿಲ್ ಪಾವತಿಸುವವರೆಗೆ ಮೃತದೇಹವನ್ನು ಹಸ್ತಾಂತರಿಸದೆ ಸತಾಯಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ.
ಈ ಸಂಬಂಧ ಹೊಸ ಕಾನೂನು ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದ್ದು, ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೆ ತರುವ ಉದ್ದೇಶ ಹೊಂದಿದೆ.
ಕೆಲ ಖಾಸಗಿ ಆಸ್ಪತ್ರೆಗಳು ಬಿಲ್ ಪಾವತಿಸಿದ ಬಳಿಕವೇ ಮೃತದೇಹ ನೀಡುವುದಾಗಿ ಹೇಳುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಇದರಿಂದ ಈಗಾಗಲೇ ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನಿನಲ್ಲಿ ಬದಲಾವಣೆ ತರಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಆಸ್ಪತ್ರೆಯ ಬಿಲ್ ಪಾವತಿಸಲು ಸಾಧ್ಯವಾಗದ ಕುಟುಂಬಗಳು ಸಾಲ ಮಾಡಿ ಹಣ ಹೊಂದಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ಹಣಕ್ಕಾಗಿ ಮೃತದೇಹವನ್ನು ಆಸ್ಪತ್ರೆಯಲ್ಲೇ ಇಟ್ಟುಕೊಂಡು ಕುಟುಂಬದವರನ್ನು ಸತಾಯಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
2007 ಮತ್ತು 2018ರಲ್ಲಿ ಈ ಸಂಬಂಧ ಕಾನೂನು ರೂಪಿಸಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ. 2018ರ ನಿಯಮದ ಪ್ರಕಾರ, ಬಾಕಿ ಬಿಲ್‌ಗೆ ಸಂಬಂಧಿಸಿದಂತೆ ಶ್ಯೂರಿಟಿ ಪಡೆದು ಮೃತದೇಹ ಹಸ್ತಾಂತರಿಸುವ ವ್ಯವಸ್ಥೆ ಇತ್ತು. ಬಿಲ್ ಪಾವತಿಸದಿದ್ದರೆ ಪ್ರಕರಣ ದಾಖಲಿಸುವ ಅವಕಾಶವೂ ಇದ್ದುದರಿಂದ, ಕಾನೂನು ಕ್ರಮದ ಭಯದಿಂದ ಕುಟುಂಬಗಳು ಸಾಲ ಮಾಡಿ ಹಣ ಪಾವತಿಸುತ್ತಿವೆ. ಹೀಗಾಗಿ ಪ್ರಸ್ತುತ ನಿಯಮಗಳಲ್ಲಿ ಬದಲಾವಣೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳ ಸಂಘಟನೆಗಳು ಸೇರಿದಂತೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಹೊಸ ಕಾನೂನು ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಇನ್ನೊಂದೆಡೆ, ಆರೋಗ್ಯ ಇಲಾಖೆಯ ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷೆ ಡಾ. ಶೋಭಾ ಪ್ರಕಾಶ್, ಸಚಿವರ ಉದ್ದೇಶ ಸರಿಯಾಗಿದೆ. ಆದರೆ, ಐಸಿಯುನಲ್ಲಿ ಚಿಕಿತ್ಸೆ, ಔಷಧೋಪಚಾರ ಸೇರಿದಂತೆ ಆಸ್ಪತ್ರೆಗಳು ಸಾಕಷ್ಟು ವೆಚ್ಚ ಮಾಡುತ್ತವೆ. ರೋಗಿ ಮೃತಪಟ್ಟ ಬಳಿಕ ಬಿಲ್ ಪಾವತಿಸದೆ ಮೃತದೇಹ ನೀಡುವಂತೆ ಕೇಳಿದರೆ ಆಸ್ಪತ್ರೆಗಳಿಗೂ ಸಮಸ್ಯೆಯಾಗಬಹುದು. ಹೀಗಾಗಿ ಈ ವಿಚಾರದಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಿ, ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.



